ರು. 5 ಕೋಟಿ ವೆಚ್ಚದ ರಸ್ತೆ, ಚರಂಡಿ ಕಾಮಗಾರಿಗೆ ಚಾಲನೆ
ಶಿಕಾರಿಪುರ: ಪಟ್ಟಣದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಮಾಜಿ ಸಂಸದ ರಾಘವೇಂದ್ರರ ಕೊಡುಗೆ ಅಪಾರವಾಗಿದೆ ಎಂದು ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಜಿ ವಸಂತಗೌಡ ತಿಳಿಸಿದರು.
ಪುರಸಭೆ 2 ನೇ ಹಂತದ ನಗರೋತ್ಥಾನ ಯೋಜನೆಯಡಿ ರು. 4 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಹಾಗೂ ಕೋಟಿ ವೆಚ್ಚದ ಚರಂಡಿ ಕಾಮಗಾರಿಗಳಿಗೆ ಪಟ್ಟಣದ ಚನ್ನಕೇಶವ ನಗರದಲ್ಲಿ ಚಾಲನೆ ನೀಡಿ ಮಾತನಾಡಿದರು. ಯಡಿಯೂರಪ್ಪ ಸಿಎಂ ಆಗಿದ್ದಾಗ ಶಿಕಾರಿಪುರದ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದರು ಎಂದರು.
ನಗರೋತ್ಥಾನ ಯೋಜನೆಯಡಿ ಪಪಂಗೆ ರು. 2 ಕೋಟಿ, ಪುರಸಭೆಗೆ ರು. 5 ಕೋಟಿ, ನಗರಸಭೆಗೆ 15 ಕೋಟಿ ವಿಶೇಷ ಅನುದಾನ ಮಂಜೂರು ಮಾಡಿಸಿದ ಯಡಿಯೂರಪ್ಪ ಹಾಗೂ ಮಾಜಿ ಸಂಸದ ರಾಘವೇಂದ್ರರ ದೂರದೃಷ್ಟಿಯ ಫಲವಾಗಿ ಇದೀಗ ನೂತನ ಬಡಾವಣೆಗಳು ರಸ್ತೆ, ಚರಂಡಿ ಮತ್ತಿತರ ಮೂಲಭೂತ ಸಮಸ್ಯೆಗಳಿಲ್ಲವಾಗಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಪುರಸಭಾದ್ಯಕ್ಷೆ ಗೌರಮ್ಮ ಮಾತನಾಡಿ, ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲಾ ಸದಸ್ಯರು ಒಗ್ಗಟ್ಟಿನ ಮೂಲಕ ಸಂಸದ ಯಡಿಯೂರಪ್ಪರನ್ನು ಬೆಂಬಲಿಸುವುದಾಗಿ ತಿಳಿಸಿದರು.
ಉಪಾಧ್ಯಕ್ಷ ಸೈಯದ್ಪೀರ್ ಸದಸ್ಯ ಟಿ.ಎಸ್. ಮೋಹನ್, ಅಂಗಡಿ ಜಗದೀಶ್, ದೂಪದಹಳ್ಳಿ ರವಿ,ಪಾಲಾಕ್ಷಪ್ಪ, ರೂಪಕಲಾ ಹೆಗಡೆ, ಪದ್ಮಾ ಗಜೇಂದ್ರ, ಶಬಾನಾ ಸಾಧಿಕ್, ಪುರಸಭಾ ಮುಖ್ಯಾಧಿಕಾರಿ ಮನೋಹರ್, ಅಭಿಯಂತರ ಪ್ರಸಾದ್, ನಾಗರಾಜಪ್ಪ, ಸುರೇಶ್, ಶ್ರೀಧರ್ ಹೆಗಡೆ, ಅನ್ವರ್ಸಾಬ್ ಇತರರು ಇದ್ದರು.