ಗೃಹ ಸಾಲಕ್ಕೆ ಬಡ್ಡಿ ಸಬ್ಸಿಡಿ
ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ: ಇದುವರೆಗೆ ಮನೆ ಕಟ್ಟುವವರಿಗೆ ಮೂಲ ಬಂಡವಾಳ ಸ್ವಲ್ಪ ಮಟ್ಟಿಗೆ ನೀಡುವ ಸರ್ಕಾರಿ ಯೋಜನೆಗಳಿದ್ದವು. ಇದೀಗ ಬಡ್ಡಿ ಸಹಾಯಧನ (ಸಬ್ಸಿಡಿ) ನೀಡುವ ರಾಜೀವ್ ಸಾಲ ಯೋಜನೆಯನ್ನು ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಜ್ಯ ಸರ್ಕಾರ ಜಾರಿಗೆ ತಂದಿದೆ.
ಆರ್ಥಿಕವಾಗಿ ಹಿಂದುಳಿದವರಿಗೆ ಮಾತ್ರವಲ್ಲ, ಕಡಿಮೆ ಆದಾಯ ವರ್ಗದವರಿಗೂ ನೆರವು ನೀಡುವ ಯೋಜನೆ ಇದು. ಮನೆ ಖರೀದಿ, ನಿರ್ಮಾಣಕ್ಕೆ ಮಾತ್ರವಲ್ಲದೇ ಈಗಿರುವ ಮನೆಗೆ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಿ ಕೊಳ್ಳಲು ಅವರಿಗೆ ಸಿಗಬಹುದಾದ ಸಾಲದ ಮೊತ್ತಕ್ಕೆ ವಿಧಿಸುವ ಬಡ್ಡಿ ಮೇಲೆ ಶೇ.5ರ ನಿಗದಿತ ಬಡ್ಡಿ ಸಹಾಯಧನ ಈ ಯೋಜನೆ ಮೂಲಕ ಪಡೆಯಬಹುದು. ಈ ಯೋಜನೆ ಜಾರಿಗೆ ಮೂಲ ಆಧಾರವಾಗಿರುವುದು ಕೇಂದ್ರದ ಸರ್ಕಾರದ ಇಷಪ್ ಯೋಜನೆ.
ಸದ್ಯ ಈ ಯೋಜನೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಜಾರಿಯಲ್ಲಿದೆ. ಈ ಯೋಜನೆಯಡಿ 14,600 ಫಲಾನುಭವಿಗಳಿಗೆ ಸವಲತ್ತು ಒದಗಿಸಲು ನಗರಾಡಳಿತ ಇಲಾಖೆ ನಿರ್ಧರಿಸಿದೆ.
ಸೌಲಭ್ಯವಿದು: ರಾಜೀವ್ ರಿನ್ ಯೋಜನೆ (ಸಾಲ ಯೋಜನೆ) ಅಡಿಯಲ್ಲಿ ಆರ್ಥಿಕ ದುರ್ಬಲ ವರ್ಗದವರಿಗೆ ಕನಿಷ್ಠ 21 ಚ.ಮೀ.ನಲ್ಲಿ ಮನೆ ಕಟ್ಟಲು ಗರಿಷ್ಠ ರು. 5 ಲಕ್ಷ ಸಾಲ ದೊರೆಯಲಿದ್ದು, ಈ ಮೊತ್ತಕ್ಕೆ ಶೇ.5ರಷ್ಟು ಬಡ್ಡಿ ಸಬ್ಸಿಡಿ ದೊರೆಯುವುದು. ಇದಕ್ಕೆ ಹೆಚ್ಚು ಸಾಲವನ್ನೂ ಬ್ಯಾಂಕಿನಿಂದ ಪಡೆಯಬಹುದು. ಆದರೆ ಹೆಚ್ಚುವರಿ ಮೊತ್ತಕ್ಕೆ ಬಡ್ಡಿ ಸಬ್ಸಿಡಿ ಸಿಗುವುದಿಲ್ಲ.
ಕಡಿಮೆ ಆದಾಯ ವರ್ಗಕ್ಕೆ ಸೇರಿದ ಫಲಾನುಭವಿಗಳು ಗರಿಷ್ಠ ರು. 8 ಲಕ್ಷ ವರೆಗೆ ಸಾಲ ಪಡೆಯಬಹುದು. ಆದರೆ ಬಡ್ಡಿ ಸಬ್ಸಿಡಿ ಸಿಗುವುದು ರು. 5 ಲಕ್ಷ ಸಾಲಕ್ಕೆ ಮಾತ್ರ. ಸಾಲ ಹಿಂದಿರುಗಿಸುವ ಅವಧಿಯನ್ನು 15ರಿಂದ 20 ವರ್ಷ ಪಡೆಯಬಹುದು.
ಈ ವರ್ಗದವರಿ 28 ಚ.ಮೀ. ಪ್ರದೇಶದಲ್ಲಿ ಮನೆ ಕಟ್ಟಬಹುದು. ಪ್ರಾಥಮಿಕ ಭದ್ರತೆಯಾಗಿ ಮನೆಯನ್ನು ಅಡಮಾನವಾಗಿ ಪರಿಗಣಿಸಬಹುದು. ಆದರೆ ರು. 5 ಲಕ್ಷ ವರೆಗಿನ ಸಾಲಕ್ಕೆ ಮತ್ತೊಬ್ಬರ ಭದ್ರತೆ ಅಥವಾ ಮೂರನೇ ವ್ಯಕ್ತಿಯ ಗ್ಯಾರೆಂಟಿ ಅವಶ್ಯವಿಲ್ಲ.
ಸಂಘಗಳಿಗೆ ಆದ್ಯತೆ: ಸಹಕಾರ ಸಂಘ, ವಸತಿ ಸಂಘ ಅಥವಾ ನೌಕರರ ಕ್ಷೇಮಾಭಿವೃದ್ಧಿ ಸಂಘ, ಕಾರ್ಮಿಕರ ಸಂಘಗಳಿಗೆ ಆದ್ಯತೆ ಸಿಗಲಿದೆ.
ಗೃಹ ನಿರ್ಮಾಣ ಸಹಕಾರ ಸಂಘಗಳೂ ಸಹ ಈ ಯೋಜನೆ ಅಡಿ ಸವಲತ್ತು ಪಡೆಯಬಹುದು. ಆದರೆ ಅಂತಹ ಸಾಲದ ಮರುಪಾವತಿಗೆ ಜಂಟಿಯಾಗಿ ಅಥವಾ ಪ್ರತ್ಯೇಕವಾಗಿ ಹೊಣೆಗಾರರಾಗಿರುತ್ತಾರೆ. ಫಲಾನುಭವಿಗಳನ್ನು ಗುರುತಿಸಲು ಒಬ್ಬ ನೋಡಲ್ ಅಧಿಕಾರಿಯನ್ನು ಸರ್ಕಾರ ನಾಮನಿರ್ದೇಶನ ಮಾಡುತ್ತದೆ. ಫಲಾನುಭವಿಯ ಸ್ವಯಂಘೋಷಿತ ಪ್ರಮಾಣ ಪತ್ರವೇ ಅರ್ಹತೆಯ ಅಂತಿಮ ಪುರಾವೆ. ಆದರೆ ಬಿಪಿಎಲ್ ಕಾರ್ಡುದಾರರಿಗೆ ಈ ಪ್ರಮಾಣಪತ್ರದ ಅಗತ್ಯವೂ ಇರುವುದಿಲ್ಲ. ಫಲಾನುಭವಿಯು ಬ್ಯಾಂಕಿನಲ್ಲಿ ಸಾಲ ಪಡೆಯುವಾಗ ತನಗಿಷ್ಟ ಬಂದ ಬಡ್ಡಿ ದರ (ಫಿಕ್ಸೆಡ್ ಅಥವಾ ಫ್ಲೋಟಿಂಗ್ ದರ) ಆಯ್ಕೆ ಮಾಡಿಕೊಳ್ಳಬಹುದು.
ಮನೆ ನಿರ್ಮಾಣ ಕಾರ್ಯ ಸಾದ್ಯವಾದಷ್ಟೂ 2 ವರ್ಷದಲ್ಲಿ ಮುಗಿಯಬೇಕು. ಬ್ಯಾಂಕುಗಳು ನಿರ್ಮಾಣ ಕಾರ್ಯದ ಪರಿಶೀಲನೆ ನಡೆಸಲಿವೆ. ಕೇಂದ್ರ ಅಥವಾ ರಾಜ್ಯ ಸರ್ಕಾರದ ಪ್ರತಿನಿಧಿಯೂ ಸಹ ಆಗಾಗ್ಗೆ ನಿರ್ಮಾಣ ಕಾರ್ಯ ಪರಿಶೀಲಿಸಬಹುದು.
ಗೃಹ ಸಾಲಕ್ಕೆ ಬಡ್ಡಿ ಸಬ್ಸಿಡಿ ನೀಡುವ ಯೋಜನೆ ಜಾರಿಗೆ ಬಂದಿರುವುದರಿಂದ ದೀರ್ಘಾವಧಿ ಸಾಲ ಪಡೆಯುವ ನಗರ ಪ್ರದೇಶದ ಜನರಿಗೆ ಅನುಕೂಲವಾಗಲಿದೆ. ಗರಿಷ್ಠ ವಾರ್ಷಿಕ ಆದಾಯ ರು. 2 ಲಕ್ಷ ಇರುವುದರಿಂದ, ಉತ್ತಮ ಮನೆ ನಿರ್ಮಾಣ ಮಾಡಿಕೊಳ್ಳಬಹುದು.
ಎಚ್.ಆರ್. ರಾಜಪ್ಪ,ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಕೋಶ, ಶಿವಮೊಗ್ಗ