ಪ್ರಕರಣ ನನ್ನ ವ್ಯಾಪ್ತಿಯೊಳಗೆ ಬರಲ್ಲ: ಕಾಗೋಡು ತಿಮ್ಮಪ್ಪ
ಶಿವಮೊಗ್ಗ: ವಿಜಯಾನಂದ ಕಾಶಪ್ಪನವರ್ ಪ್ರಕರಣ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ, ಅವರ ಮೇಲೆ ನಾನು ಕ್ರಮ ಕೈಗೊಳ್ಳುವ ಪ್ರಮೇಯವೇ ಬರುವುದಿಲ್ಲ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಇಲ್ಲಿನ ನಿರೀಕ್ಷಣಾ ಮಂದಿರದಲ್ಲಿ ಶುಕ್ರವಾರ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಕಾಶಪ್ಪನವರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವರದಿ ಕೊಟ್ಟಿದ್ದಾರೆ. ಅದರಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರೇ ಹಲ್ಲೆ ಮಾಡಿದ್ದಾರೆ ಎಂದು ಪ್ರತ್ಯೇಕವಾಗಿ ಹೇಳಿಲ್ಲ. 4 ಜನರ ಗುಂಪಿತ್ತು, ಅವರು ಹಲ್ಲೆ ಮಾಡಿದ್ದಾರೆ ಎಂದಿದೆ ಎಂದು ವಿವರಿಸಿದರು.
ಸದನದಲ್ಲಿ ಕಾಶಪ್ಪನವರ್ ವಿಚಾರವನ್ನೇ ದೊಡ್ಡ ವಿಷಯ ಮಾಡಿಕೊಂಡು, ಬೇಡವಾದ ವಿಚಾರಕ್ಕೆ ಜಾಸ್ತಿ ಒತ್ತು ಕೊಡಲಾಗುತ್ತಿದೆ. ಶೂನ್ಯವೇಳೆಯಲ್ಲಿ ಚರ್ಚಿಸಬೇಕಾದ ವಿಷಯವನ್ನು ದೊಡ್ಡದು ಮಾಡಲಾಗುತ್ತಿದೆ ಎಂದು ಬೇಸರಿಸಿದರು.
ಗ್ರಾಮೀಣಾಭಿವೃದ್ಧಿ ವಿಚಾರದಲ್ಲಿ 36 ಶಾಸಕರು ಚರ್ಚೆಯಲ್ಲಿ ಭಾಗವಹಿಸಿ ಅಭಿಪ್ರಾಯ ಹಂಚಿಕೊಂಡಿದ್ದರು. ಈ ಸಂಗತಿ ಖುಷಿ ತಂದಿತ್ತು. ಅದೇ ರೀತಿ ಕಂದಾಯ ಇಲಾಖೆಗೆ ಸಂಬಂಧಪಟ್ಟ ಮಹತ್ವದ ಚರ್ಚೆ ನಡೆಯಬೇಕಾಗಿತ್ತು.
ಆದರೆ, ಈ ಪ್ರಕರಣದಿಂದ ತಡೆ ಬಿದ್ದಿದೆ. ಸೋಮವಾರ ಸದನ ಮುಂದುವರಿಯಲಿದ್ದು, ಕಂದಾಯ ಇಲಾಖೆಯ ವಿಚಾರದಲ್ಲಿ ಉತ್ತಮ ಚರ್ಚೆ ನಡೆಯುತ್ತದೆ ಎಂಬ ವಿಶ್ವಾಸವಿದೆ ಎಂದರು.
ಶಾಸಕ ಕಾಶಪ್ಪನವರ್ ಪ್ರಕರಣ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಕಾಗೋಡು ತಿಮ್ಮಪ್ಪ ಸ್ಪಷ್ಟಪಡಿಸಿದರು.