ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸರ್ಕಾರದ ನಿರ್ಲಕ್ಷ; ದುಸ್ಥಿತಿಯಲ್ಲಿ ಉರ್ದು ಶಾಲೆ

Mainashree
Updated On : 5 Jul 2014, 11:03 am

ವಿಶೇಷ ವರದಿ
ಸೊರಬ:  ಶತಮಾನದ ಹೊಸ್ತಿಲಲ್ಲಿ ಇರುವ ಪಟ್ಟಣದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ಯಾವುದೇ ಅಭಿವೃದ್ಧಿ ಕಾಣದೇ ದುಸ್ಥಿತಿಯಲ್ಲಿದೆ.
ಪಟ್ಟಣದ ಚಿಕ್ಕಪೇಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ 1925ನೇ ಇಸವಿಯಲ್ಲಿ ಪ್ರಾರಂಭಗೊಂಡು ತಾಲೂಕಿನಲ್ಲಿಯೇ ಹಳೆಯ ಭಾಷಾ ಅಲ್ಪಸಂಖ್ಯಾತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಂಬ ಹೆಗ್ಗಳಿಕೆ ಪಡೆದಿದೆ. ಮೊದಲು ಮಾರ್ಕೇಟ್ ರಸ್ತೆಯ ಬಾಡಿಗೆ ಕಟ್ಟಡದಲ್ಲಿ ಆರಂಭಗೊಂಡ ಶಾಲೆ ಸುಮಾರು 50 ವರ್ಷದ ನಂತರ ಈಗಿರುವ ಸರ್ಕಾರಿ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಒಟ್ಟು 9 ಕೊಠಡಿಗಳಿರುವ ಇಲ್ಲಿ 4 ಕೊಠಡಿಗಳು ಸಂಪೂರ್ಣ ಶಿಥಿಲಗೊಂಡಿದೆ. ಉಳಿದ 5 ಕೊಠಡಿಗಳಲ್ಲಿ 2 ತರಗತಿಗಳನ್ನು ಒಟ್ಟಾಗಿಸಿ ಸೇರಿಸಿ ಶಿಕ್ಷಣ ನೀಡಲಾಗುತ್ತಿದೆ. 1 ರಿಂದ 7ನೇ ತರಗತಿಯವರೆಗೆ ಇಲ್ಲಿ ಶಿಕ್ಷಣ ದೊರೆಯುತ್ತದೆ.
ಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಇಲ್ಲಿ ಅವರ ಶಿಕ್ಷಣ ಕಲಿಕೆಗೆ ಹಿನ್ನೆಡೆ ಆಗುತ್ತಿದೆ. ಇದರ ಜೊತೆಗೆ ಶಾಶ್ವತ ಕುಡಿಯುವ ನೀರು ವ್ಯವಸ್ಥೆ ಇಲ್ಲ. ಪಟ್ಟಣ ಪಂಚಾಯಿತಿ ಪೂರೈಸುವ ಫ್ಲೋರೈಡ್ ನೀರನ್ನೇ ಮಕ್ಕಳು ಕುಡಿಯುವಂತಾಗಿದೆ. ಶಾಲಾ ಆಜುಬಾಜು ಸುಮಾರು 5 ಮಾಂಸಹಾರಿ ಹೋಟೆಲ್‌ಗಳಿವೆ. ಗ್ರಾಹಕರು ಪಾನಮತ್ತರಾಗಿ ಶಾಲಾ ಕಾಂಪೌಂಡ್ ಪಕ್ಕದಲ್ಲಿಯೇ ಮಲ-ಮೂತ್ರ ವಿಸರ್ಜನೆ ಮಾಡುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಕಿರಿಕಿರಿಯಾಗಿದೆ. ದುಸ್ಥಿತಿಯಲ್ಲಿ ಇರುವ ಕಟ್ಟಡದಿಂದಾಗಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುವ ವಾತಾವರಣ ನಿರ್ಮಾಣವಾಗಿದೆ. ಈ ಹಿಂದೆ 350ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಶಾಲೆಯಲ್ಲಿ ಈಗ 125 ಮಕ್ಕಳು ಮಾತ್ರ ಇದ್ದಾರೆ.
ಏಷ್ಯಾ ಖಂಡದಲ್ಲಿಯೇ ಪ್ರಸಿದ್ಧವಾಗಿರುವ ದುಬೈನ ಅವರ್ ಒನ್ ಇಂಗ್ಲಿಷ್ ಸ್ಕೂಲ್‌ನ ಉಪನ್ಯಾಸಕ ಹಾಗೂ ಮೇಲ್ವಿಚಾರಕ ಸೈಯದ್ ಜಾಕೀರ್ ಉಲ್‌ಹಕ್, ಕರ್ನಾಟಕ ಉರ್ದು ಅಕಾಡಮಿಯ ಮಾಜಿ ಅಧ್ಯಕ್ಷ ಹಫೀಝ್ ಅಮ್ಜದ್ ಹುಸೇನ್, ಇತ್ತೀಚೆಗೆ ನಿಧನರಾದ ವಿಕ್ಟೋರಿಯಾ ಆಸ್ಪತ್ರೆಯ ಡಾ. ನಸೀರ್ ಅಹ್ಮದ್, ಪಟ್ಟಣದಲ್ಲಿ ಸೇವೆ ಸಲ್ಲಿಸುತ್ತಿರುವ ಡಾ. ಸೈಯದ್ ಹಾಷಂ ಹೀಗೆ ಹಲವು ಪ್ರತಿಭೆಗಳು ಕಲಿತ ಹಿರಿಮೆ ಈ ಶಾಲೆಗೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement