ಕನ್ನಡಕ್ಕೆ ಚಾಕರಿ ಪ್ರಜ್ಞೆ ಬೇಡ: ಡಾ.ಬಂಜಗೆರೆ
ಸಾಗರ: ಹಣ, ಭೌತಿಕ ಸಂಪತ್ತಿನ ವ್ಯಾಮೋಹದಿಂದ ಕನ್ನಡಿಗರು ಬೇರೆ ಭಾಷೆಯತ್ತ ಆಕರ್ಷಿತರಾಗಿದ್ದಾರೆ. ಇಂಗ್ಲಿಷ್ ಕಲಿಕೆಯಿಂದ ಮಾಲಿಕರ ಕಾರು ಚಾಲಕ, ಸ್ಟೆನೋ ಹೆಚ್ಚೆಂದರೆ ಸ್ವಾಗತಕಾರರಾಗಬಹುದೇ ಹೊರತು ನಾವೇ ಮಾಲಿಕರಾಗಲು ಸಾಧ್ಯವಿಲ್ಲ. ಕನ್ನಡಕ್ಕೆ ಚಾಕರಿ ಪ್ರಜ್ಞೆ ಬೇಡ ಎಂದು ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ.ಬಂಜಗೆರೆ ಜಯಪ್ರಕಾಶ್ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಹಮ್ಮಿಕೊಂಡಿದ್ದ ಸಾಗರ ತಾ. 4ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಂಜಗೆರೆ ದಿಕ್ಸೂಚಿ ಭಾಷಣ ಮಾಡಿದರು.
ಕನ್ನಡದ ಚಟುವಟಿಕೆಯೇನೂ ಕಡಿಮೆಯಾಗಿಲ್ಲ. ಕನ್ನಡದಲ್ಲಿ ಪ್ರತಿ ವರ್ಷ ಸುಮಾರು 700 ಪುಸ್ತಕಗಳು ಪ್ರಕಟವಾಗುತ್ತಿವೆ. ಆದರೆ ನಮ್ಮ ಮನಸ್ಸಿನಲ್ಲಿ ಕನ್ನಡದ ಮಾನ್ಯತೆ ಕಡಿಮೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.
ಪ್ರಪಂಚದ ಯಾವುದೇ ಭಾಷೆಯನ್ನು ಅದರದ್ದೇ ಆದ ಶೈಲಿಯಲ್ಲಿ ಮಾತನಾಡಲು ಸಾಧ್ಯವಿರುವುದು ಕನ್ನಡದಲ್ಲಿ ಮಾತ್ರ. ಕನ್ನಡಕ್ಕೆ ಇಷ್ಟೆಲ್ಲ ಹೆಚ್ಚುಗಾರಿಕೆ ಇದ್ದರೂ ಶರಣಾಗತಿಯ ಭಾವನೆ ಯಾಕೆ ಎಂದು ಅವರು ಪ್ರಶ್ನಿಸಿದರು. ಸಮ್ಮೇಳನ ಸರ್ವಾಧ್ಯಕ್ಷ ಡಾ.ಜಿ.ಎಸ್.ಭಟ್, ಸಾಹಿತಿ ಡಾ.ನಾ.ಡಿಸೋಜ, ಜಾನಪದ ವಿದ್ವಾಂಸ ಹುಚ್ಚಪ್ಪ ಮಾಸ್ತರ್, ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ತಾ. ಅಧ್ಯಕ್ಷ ವಿ.ಟಿ.ಸ್ವಾಮಿ ಮೊದಲಾದವರು ಇದ್ದರು.