ವಲಸಿಗರ ಮಕ್ಕಳಿಗಾಗಿ ಟೆಂಟ್ ಶಾಲೆ: ಜಿಪಂ ಸಿಇಒ
ಶಿವಮೊಗ್ಗ: ಜಿಲ್ಲೆಯ ವಿವಿಧ ಪ್ರದೇಶದಲ್ಲಿರುವ ಕಲ್ಲುಕ್ವಾರಿ ಹಾಗೂ ಇಟ್ಟಿಗೆ ಭಟ್ಟಿ ಪ್ರದೇಶಗಳಲ್ಲಿನ ವಲಸಿಗರ ಮಕ್ಕಳಿಗಾಗಿ ಟೆಂಟ್ ಶಾಲೆ ಆರಂಭಿಸುವುದಾಗಿ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದ್ದಾರೆ. ತಾಲೂಕು ಕಲ್ಲಗಂಗೂರು ಕಲ್ಲು ಕ್ವಾರಿ ಪ್ರದೇಶದಲ್ಲಿ ಆರಂಭಿಸಲಾಗಿರುವ ಟೆಂಟ್ ಶಾಲೆಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ 3 ಸಾವಿರಕ್ಕೂ ಹೆಚ್ಚು ವಲಸಿಗರ ಮಕ್ಕಳನ್ನು ಗುರುತಿಸಲಾಗಿದೆ. ಈ ಪೈಕಿ 1,500 ಮಕ್ಕಳು ಈ ವರ್ಷ ಲಭ್ಯವಾಗಿದ್ದು, ಈ ಎಲ್ಲಾ ಮಕ್ಕಳಿಗೆ ಆಯಾ ಕ್ವಾರಿ ಹಾಗೂ ಇಟ್ಟಿಗೆ ಭಟ್ಟಿ ಪ್ರದೇಶದಲ್ಲಿಯೇ ಟೆಂಟ್ ಶಾಲೆ ಆರಂಭಿಸಲಾಗುವುದು ಎಂದು ಹೇಳಿದರು.
ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಮಾಹಿತಿ ಪಡೆದು, ಜಿಲ್ಲಾಡಳಿತದಿಂದ ಪೊಲೀಸ್ ಇಲಾಖೆ ದಾಳಿ ನಡೆಸಿದ ಸಂದರ್ಭದಲ್ಲಿ ಕಲ್ಲು ಕ್ವಾರಿಗಳಲ್ಲಿ ಉತ್ತರ ಕರ್ನಾಟಕ ಭಾಗದಿಂದ ವಲಸಿಗರು ಬಂದು ಕೆಲಸ ಮಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಯಿತು. ಈ ವಲಸಿಗರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದೆ ನಿರಕ್ಷರರನ್ನಾಗಿ ಮಾಡುತ್ತಿರುವ ಬಗ್ಗೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪೋಷಕರನ್ನು ಮನ ಓಲೈಸಿ ಈ ಟೆಂಟ್ ಶಾಲೆ ಕಲ್ಪನೆಯನ್ನು ಸಾಕಾರಗೊಳಿಸಲಾಗಿದೆ ಎಂದರು.
ಪ್ರಸ್ತುತ ಕಲ್ಲಗಂಗೂರಿನ ಕಲ್ಲು ಕ್ವಾರೆಗಳಲ್ಲಿ ಸುಮಾರು 50ಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು, 45 ರಿಂದ 50 ಮಕ್ಕಳು ಇದ್ದಾರೆ. ಈ ಪೈಕಿ 27 ಮಕ್ಕಳನ್ನು ಟೆಂಟ್ ಶಾಲೆಗೆ ದಾಖಲು ಮಾಡಲಾಗಿದೆ. ಕಲ್ಲುಗಂಗೂರಿನ ಶಾಲೆಯ ಶಿಕ್ಷಕರೊಬ್ಬರನ್ನು ಈ ಟೆಂಟ್ ಶಾಲೆಗೆ ನಿಯೋಜಿಸಲಾಗಿದೆ. ಹಾಗೂ ಕಲ್ಲುಗಂಗೂರಿನ ಶಾಲೆಯಿಂದಲೇ ಬಿಸಿ ಊಟದ ಸರಬರಾಜು ವ್ಯವಸ್ಥೆ ಮಾಡಲಾಗಿದೆ. ದಾಖಲಾದ ಎಲ್ಲಾ ಮಕ್ಕಳಿಗೆ ಸಮವಸ್ತ್ರ, ಪಠ್ಯ ಪುಸ್ತಕ, ಲೇಖನ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದು ತಿಳಿಸಿದರು. ವಲಸಿಗರ ಮಕ್ಕಳಿಗೆ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವುದು ಈ ಯೋಜನೆಯ ಪ್ರಮುಖ ಉದ್ಧೇಶವಾಗಿದ್ದು, ಸರ್ವ ಶಿಕ್ಷಾ ಅಭಿಯಾನದ ಮೂಲಕ ಸಾರ್ವಜನಿಕರ ಸಹಕಾರದೊಂದಿಗೆ ಟೆಂಟ್ ಶಾಲೆ ಯೋಜನೆ ಅನುಷ್ಠಾನಗೊಳಿಸಲಾಗಿದೆ ಎಂದು ನುಡಿದರು. ಸರ್ವ ಶಿಕ್ಷಣ ಅಭಿಯಾನದ ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ ಗಣಪತಿ, ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಹಾಲಾನಾಯ್ಕ, ಬಿ.ಆರ್.ಸಿ. ಲೋಕೇಶ್ ಉಪಸ್ಥಿತರಿದ್ದರು.