ಶರಾವತಿ ಸಂತ್ರಸ್ತರ ಸ್ಥಿತಿಗತಿ ಅಧ್ಯಯನ ಮೊದಲಾಗಲಿ
ಸಾಗರ: ತಾಲೂಕಿನಲ್ಲಿ ಶರಾವತಿ ಹಿನ್ನೀರಿನಲ್ಲಿ ಮುಳುಗಡೆಯಾದ ಸಂತ್ರಸ್ತರ ಶೈಕ್ಷಣಿಕ, ಸಾಂಸ್ಕೃತಿಕ, ಸಾಮಾಜಿಕ ಸ್ಥಿತಿಗತಿ ಕುರಿತು ಸಮಗ್ರ ಅಧ್ಯಯನ ನಡೆಯಬೇಕು ಎಂದು ಸಾಗರ ತಾ. ನಾಲ್ಕನೇ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಡಾ.ಜಿ.ಎಸ್.ಭಟ್ ಅಭಿಪ್ರಾಯಪಟ್ಟರು.
ತಾ. ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಹಮ್ಮಿಕೊಂಡಿದ್ದ ಸಾಹಿತ್ಯ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮುಳುಗಡೆ ಸಂದರ್ಭದಲ್ಲಿ ಮನೆ, ಮಾರು ಮಾತ್ರ ಚದುರಿ ಹೋಗಿಲ್ಲ. ಮನಸ್ಸುಗಳು ಸಹ ಚದುರಿ ಹೋಗಿದೆ. ಅವುಗಳನ್ನು ಕ್ರೋಢಿಕರಿಸಿ ದಾಖಲಿಸುವ ಪ್ರಯತ್ನ ನಡೆಯಬೇಕು ಎಂದು ಒತ್ತಾಯಿಸಿದರು.
ಮಕ್ಕಳು ಆಂಗ್ಲಭಾಷೆಯತ್ತ ಹೊರಳುತ್ತಿದ್ದಾರೆ ಎಂದು ದೂರುವ ಮೊದಲು ನಾವು ಅವರಿಗೆ ಕನ್ನಡ ಭಾಷೆಯ ಬಗ್ಗೆ ಪ್ರೀತಿ ಹೆಚ್ಚಿಸುವ ನಿಟ್ಟಿನಲ್ಲಿ ಮಾರ್ಗೋಪಾಯ ಕಂಡುಕೊಳ್ಳಬೇಕು. ನಗರ ಹಾಗೂ ಗ್ರಾಮಾಂತರ ಪ್ರದೇಶದ ಆಸಕ್ತ ಮಕ್ಕಳಿಗೆ ಹೆಸರಾಂತ ಲೇಖಕರ ಕಥೆಗಳನ್ನು ಹೇಳುವುದು, ಸಾಹಿತ್ಯದತ್ತ ಅವರು ಆಕರ್ಷಿತರಾಗುವಂತೆ ಮಾಡುವ ಅಗತ್ಯವಿದೆ. ನಮ್ಮ ಊರು, ಗ್ರಾಮ, ಕೇರಿಗಳ ಹೆಸರಿನಲ್ಲಿ ಕನ್ನಡತನ ಇರುತ್ತದೆ. ಅದನ್ನು ಬದಲಾಯಿಸುವ ಕೆಲಸ ನಡೆಯುತ್ತದೆ. ತಾಲೂಕಿನಲ್ಲಿರುವ ಸ್ಥಳನಾಮಗಳ ಸಮೀಕ್ಷೆ ಮತ್ತು ಅಧ್ಯಯನ ನಡೆಸುವ ಕೆಲಸ
ಪರಿಷತ್ವತಿಯಿಂದ ಆಗಬೇಕು ಎಂದು ಹೇಳಿದರು.
ಸಮ್ಮೇಳನ ಉದ್ಘಾಟನೆಗೂ ಮೊದಲು ವಿಭಾಗಾಧಿಕಾರಿ ಡಾ.ಉದಯಕುಮಾರ್ ಶೆಟ್ಟಿ ರಾಷ್ಟ್ರಧ್ವಜಾರೋಹಣ, ಹಿರಿಯ ಸಾಹಿತಿ ಪ.ಬಂಗಾರಿ ಭಟ್ ಧ್ವಜಾರೋಹಣ ಹಾಗೂ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ ಪರಿಷತ್ ಧ್ವಜಾರೋಹಣ ನೆರವೇರಿಸಿದರು. ಪರಿಷತ್ತಿನ ಕಾರ್ಯದರ್ಶಿ ವಿ.ಶಂಕರ್, ಜಿ.ನಾಗೇಶ್, ನಿರ್ದೇಶಕ ಶಿವಯೋಗಿ, ಉಮೇಶ್ ಹಿರೇನೆಲ್ಲೂರು, ಮ.ಸ.ನಂಜುಂಡಸ್ವಾಮಿ, ಎಂ.ಸಿ.ಪರಶುರಾಮಪ್ಪ, ಆನಂದ ಬಾಳೆಕೊಪ್ಪ, ನಗರಸಭಾ ಸದಸ್ಯೆ ಪಸಿಹಾ, ಕುಮಾರಸ್ವಾಮಿ ಕೊಪ್ಪ, ಎಚ್.ಜಿ.ಸುಬ್ರಹ್ಮಣ್ಯ ಭಟ್ ಇನ್ನಿತರರು ಹಾಜರಿದ್ದರು.