ಹೆಚ್ಚುವರಿ ಶಿಕ್ಷಕರ ನಿಯೋಜನೆ: ಡಿಡಿಪಿಐಗೆ ಶಾಸಕ ಮಧು ಬಂಗಾರಪ್ಪ ಸೂಚನೆ
ಸೊರಬ: ಶಿಕ್ಷಕರ ವರ್ಗಾವಣೆ ಅಥವಾ ನಿಯೋಜನೆ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಎಸ್‌ಡಿಎಂಸಿ ವತಿಯಿಂದ ಆಕ್ಷೇಪಣೆ ವ್ಯಕ್ತವಾದಲ್ಲಿ ಯಾವುದೇ ಗೊಂದಲ ನಿರ್ಮಾಣವಾಗದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶಾಲೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ, ನಂತರ ಬಿಡುಗಡೆಗೊಳಿಸಬೇಕು ಎಂದು ಶಾಸಕ ಮಧು ಬಂಗಾರಪ್ಪ ತಿಳಿಸಿದರು. ಶನಿವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಿಸಲು ತಾಲೂಕಿಗೆ ಹೆಚ್ಚುವರಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳವ ಬಗ್ಗೆ ಸಾರ್ವಜನಿಕರು ಹಾಗೂ ಎಸ್‌ಡಿಎಂಸಿ ವತಿಯಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಹೆಚ್ಚುವರಿ ಶಿಕ್ಷಕರನ್ನು ನೇಮಿಸುವ ಆದೇಶ ಹೊರಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು. ಕೂಲಂಕಷ ಚರ್ಚಿಸಿ: ಪಟ್ಟಣದ ಸರ್ಕಾರಿ ಉರ್ದು ಶಾಲೆ ಕುರಿತು ಜುಲೈ 5 ರಂದು ಪ್ರಕಟವಾದ ಸರ್ಕಾರದ ನಿರ್ಲಕ್ಷ್ಯ - ದುಸ್ಥಿತಿಯಲ್ಲಿ ಉರ್ದು ಶಾಲೆ ಕನ್ನಡಪ್ರಭ ವರದಿಯನ್ನು ಸಭೆಯಲ್ಲಿ ಪ್ರಸ್ತಾಪಿಸಿ, ಉರ್ದು ಶಾಲೆ ಕಟ್ಟಡ ಶಿಥಿಲವಾಗಿರುವ ಬಗ್ಗೆ ಸರ್ಕಾರದ ಗಮನಕ್ಕೆ ತಂದು ತುರ್ತು ದುರಸ್ತಿಗೆ ಕ್ರಮ ತೆಗೆದು ಕೊಳ್ಳಬೇಕು ಎಂದು ಡಿಡಿಪಿಐ ಬಸವರಾಜಪ್ಪ ಅವರಿಗೆ ಸೂಚಿಸಿದರು.
ಪಟ್ಟಣದ ಚಿಕ್ಕಪೇಟೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮೊಹಮ್ಮದ್ ಆರೀಫ್‌ಜಿಲ್ಲಾ ಅಕ್ಷರ ದಾಸೋಹ ಸಹ ನಿರ್ದೇಶಕ ಅನ್ಸರ್ ಅಲಿ ಬೇಗ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ನಾಗರಾಜ, ಸಮನ್ವಯಾಧಿಕಾರಿ ವಿ.ಎಚ್. ಪಂಚಾಕ್ಷರಿ, ತಾಪಂ ಪ್ರಭಾರ ಅಧ್ಯಕ್ಷೆ ನೀಲಮ್ಮ ಸುರೇಶ್, ಸದಸ್ಯ ಬರಗಿ ನಿಂಗಪ್ಪ, ವೀರಭದ್ರಗೌಡ, ಜಯಶೀಲಪ್ಪ, ಎಸ್‌ಡಿಎಂಸಿ ಸದಸ್ಯರು, ಶಿಕ್ಷಣ ಇಲಾಖಾ ಅಧಿಕಾರಿಗಳು ಇದ್ದರು.