ಕೋಯಾ ಪ್ರೌಢಶಾಲೆಯಲ್ಲಿ ಬೆಂಕಿ; ಅಪಾರ ನಷ್ಟ
ಸಾಗರ: ಪಟ್ಟಣದ ಬಿ.ಎಚ್. ರಸ್ತೆಯಲ್ಲಿ ಇರುವ ಕ್ರೆಸೆಂಟ್ ಎಜ್ಯುಕೇಶನ್ ಸೊಸೈಟಿಗೆ ಸೇರಿರುವ ಕೋಯಾ ಪ್ರೌಢಶಾಲೆಗೆ ಭಾನುವಾರ ತಡರಾತ್ರಿ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರು. ನಷ್ಟ ಸಂಭವಿಸಿದೆ. ಶಾರ್ಟ್ ಸರ್ಕೂಟ್‌ನಿಂದ ಬೆಂಕಿ ತಗುಲಿದೆಯೋ ಅಥವಾ ಯಾರಾದರೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆಯೇ ಎನ್ನುವ ಕುರಿತು ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.
ಬೆಂಕಿ ಅನಾಹುತದಲ್ಲಿ ದಾಖಲಾತಿ ನಾಶವಾಗಿವೆ. ಪ್ರಮುಖ 37 ದಾಖಲಾತಿ, ಶಿಕ್ಷಕರ ಸೇವಾ ದಾಖಲಾತಿ, ಅಲ್ಪಸಂಖ್ಯಾತರ ಇಲಾಖೆಯಿಂದ ಬಂದಿದ್ದ ಕೆಲವು ದಾಖಲಾತಿ, ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಅಂಕಪಟ್ಟಿ, ಸ್ಕಾಲರ್‌ಶಿಪ್ ದಾಖಲಾತಿ, ಪ್ರಯೋಗಾಲಯದಲ್ಲಿದ್ದ ಮೈಕ್ರೋಸ್ಕೋಪ್, ಪ್ರೊಜೆಕ್ಟರ್ ಹಾಗೂ 600ಕ್ಕೂ ಹೆಚ್ಚು ವಿದ್ಯಾರ್ಥಿಗಳ ಶಾಲಾ ದಾಖಲಾತಿ ಬೆಂಕಿಗೆ ಆಹುತಿಯಾಗಿದೆ. ಶಾಲೆಯ ಬೀರುವಿನಲ್ಲಿಟ್ಟಿದ್ದ ವಿದ್ಯಾರ್ಥಿಗಳ ಶಾಲಾ ಶುಲ್ಕ 23 ಸಾವಿರಕ್ಕೂ ಹೆಚ್ಚಿನ ನಗದು ಸಹ ಬೆಂಕಿಯಲ್ಲಿ ಕರಕಲಾಗಿದೆ.
ಪ್ರತಿಕ್ರಿಯಿಸಿದ ಕ್ರೆಸೆಂಟ್ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಮಕ್ಬೂಲ್ ಅಹ್ಮದ್, ಪೇಟೆ ಠಾಣೆಗೆ ದೂರು ದಾಖಲಿಸಲಾಗಿದೆ. ಪ್ರತಿದಿನ ನಮ್ಮ ಶಾಲೆಯ ಗುಮಾಸ್ತ ರಾತ್ರಿ 10 ಗಂಟೆಗೆ ಬಂದು ಶಾಲೆಯನ್ನು ಸುತ್ತಾಡಿಕೊಂಡು, ದೀಪ ಹಾಕಿ ಹೋಗುತ್ತಾರೆ. ಭಾನುವಾರ ರಾತ್ರಿ 1 ಗಂಟೆಯ ನಂತರ ಈ ಅವಘಡ ಸಂಭವಿಸಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ ಎಂದು ಹೇಳಿದರು.
ಸ್ಥಳಕ್ಕೆ ಅಡಿಶನಲ್ ಎಸ್ಪಿ ಪಿ.ದಯಾಳ್, ಪೇಟೆ ಠಾಣೆ ಸರ್ಕಲ್ ಇನ್‌ಸ್ಪೆಕ್ಟರ್ ಕೃಷ್ಣಮೂರ್ತಿ, ಗ್ರಾಮಾಂತರ ಠಾಣೆಯ ಪಿ.ಎಸ್.ಐ. ಶಶಿಕಾಂತ್ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ನಗರಸಭೆ ಅಧ್ಯಕ್ಷೆ ಎನ್.ಲಲಿತಮ್ಮ, ತಾಪಂ ಅಧ್ಯಕ್ಷೆ ಜ್ಯೋತಿ ಮುರಳೀಧರ್ ಕೂಡ ಭೇಟಿ ನೀಡಿದ್ದರು.
ಶಿವಮೊಗ್ಗದ ಸರ್ಕಾರಿ ವಿದ್ಯುತ್ ಪರಿವೀಕ್ಷಕ ಡಿ.ಸಿದ್ದಪ್ಪ ಸ್ಥಳಕ್ಕೆ ಭೇಟಿ ನೀಡಿ ಸುಟ್ಟಿರುವ ವೈರ್‌ಗಳನ್ನು ಸಂಗ್ರಹಿಸಿ, ಪ್ರಯೋಗಾಲಯಕ್ಕೆ ಕಳಿಸುವುದಾಗಿ ಹೇಳಿದ್ದಾರೆ. ಬೆಂಕಿ ಅಪಘಾತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವೇ ಎಂಬುದರ ಕುರಿತು ಇನ್ನು ಮೂರ್ನಾಲ್ಕು ದಿನಗಳಲ್ಲಿ ವರದಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.