ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬತ್ತಕ್ಕೆ ನೀರು ಕೊಡಲಾಗದೆಂದ ಕಾಡಾ

Vishwanath S
Updated On : 8 Jul 2014, 11:32 am

ಶಿವಮೊಗ್ಗ: ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಯಾವುದನ್ನು ದು:ಸ್ವಪ್ನವೆಂದು ಭಾವಿಸಿದ್ದರೋ ಆ ದಿನ ಬಂದೇ ಬಿಟ್ಟಿತು. ಬತ್ತ ಬೆಳೆಗೆ ನೀರು ನೀಡಲು ಸಾಧ್ಯವೇ ಇಲ್ಲ ಎಂದು ಭದ್ರಾ ಅಚ್ಚುಕಟ್ಟು ಪ್ರಾಧಿಕಾರದ ನೀರಾವರಿ ಸಲಹಾ ಸಮಿತಿ ತೀರ್ಮಾನಕ್ಕೆ ಬಂದಿದೆ.
ಸಾಮಾನ್ಯವಾಗಿ ಪ್ರತಿವರ್ಷ ಭದ್ರಾ ಎಡ ಮತ್ತು ಬಲದಂಡೆ ನಾಲೆಗಳ ಅಚ್ಚುಕಟ್ಟು ಪ್ರದೇಶಕ್ಕೆ ಜುಲೈ 1 ರಿಂದ ನೀರು ಹರಿಸಲಾಗುತ್ತದೆ. ಆದರೆ, ಜಲಾಶಯದಲ್ಲಿ ನೀರು ಕಡಿಮೆ ಇರುವ ಕಾರಣ ಸಭೆಯನ್ನು ಸುಮಾರು 15 ದಿನ ತಡವಾಗಿ ಕರೆಯಲಾಗಿತ್ತು.
ಸೋಮವಾರ ಭದ್ರಾ ಅಚ್ಚುಕಟ್ಟು ಪ್ರಾಧಿಕಾರ ಸಭಾಂಗಣದಲ್ಲಿ ನಡೆದ ಸಲಹಾ ಸಮಿತಿ ಸಭೆಯಲ್ಲಿ ಸುದೀರ್ಘ ಚರ್ಚೆ ನಂತರ ಈ ಕಠಿಣ ತೀರ್ಮಾನ ಕೈಗೊಳ್ಳಲಾಗಿದೆ.
120 ದಿನ ಹರಿಸಲು ಸಾಧ್ಯ:  ಜುಲೈನಿಂದ ಅಕ್ಟೋಬರ್ ವರೆಗೆ ಮುಂಗಾರು ಹಂಗಾಮಿಗೆ 120 ದಿನ ನೀರು ಹರಿಸಲು 36 ಟಿಎಂಸಿ ನೀರು ಬೇಕು. ಆದರೆ, ಹಾಲಿ ಲಭ್ಯವಿರುವುದು 6.8 ಟಿಎಂಸಿ ಮಾತ್ರ. ಈ ನೀರು ಕೇವಲ 20 ದಿನಗಳಿಗೆ ಸಾಕಾಗುತ್ತದೆ. ಇದನ್ನು ನಾಲೆಗಳಿಗೆ ಹರಿಸಿದಲ್ಲಿ ಸಸಿಮಡಿ ಮಾಡುವುದಕ್ಕೂ ಅವಕಾಶವಾಗುವುದಿಲ್ಲ. ಇದರಿಂದ ನೀರು ಪೋಲಾಗುತ್ತದೆ. ಭದ್ರಾ ಜಲಾಶಯಕ್ಕೆ ಜೂನ್, ಜುಲೈ ಮತ್ತು ಆಗಸ್ಟ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತದೆ. ಆದರೆ, ಈ ಬಾರಿ ಆರಂಭದ 35 ದಿನಗಳಲ್ಲಿ ಜಲಾಶಯಕ್ಕೆ ಬಂದಿದ್ದು ಕೇವಲ 4.7 ಟಿಎಂಸಿ ಮಾತ್ರ.
ಈ ಬಾರಿ ಬತ್ತ ಬೆಳೆಯಬೇಡಿ:  ಆದ್ದರಿಂದ ಭದ್ರಾ ಜಲಾನಯನ ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮಳೆ ಬೀಳದ ಕಾರಣ ಈ ಬಾರಿ ಭದ್ರಾ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣವು ಅತ್ಯಂತ ಕಡಿಮೆ ಇದ್ದು, ಬತ್ತ್ತ ಬೆಳೆಗೆ ಸಾಕಾಗುವಷ್ಟು ಪ್ರಮಾಣದಲ್ಲಿ ನೀರು ಲಭ್ಯವಿಲ್ಲ. ಹಾಗಾಗಿ ಭತ್ತದ ಬೆಳೆಗೆ ನೀರು ಬಿಡಲಾಗುವುದಿಲ್ಲ ಎಂಬ ತೀರ್ಮಾನಕ್ಕೆ ಸಮಿತಿ ಬಂದಿದೆ. ಹಾಗಾಗಿ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರು ಈ ಬಾರಿ ಬತ್ತ ಬೆಳೆಯಬಾರದೆಂದು ಸೂಚಿಸಿದೆ.
ಇದಕ್ಕೆ ಪರ್ಯಾಯವಾಗಿ ಈ ಭಾಗದ ರೈತರು ಮಳೆಯ ಆಧಾರಿತ ಅರೆ ನೀರಾವರಿ ಬೆಳೆಗಳಾದ ಮುಸುಕಿನ ಜೋಳ, ರಾಗಿ, ದ್ವಿದಳ ಧಾನ್ಯಗಳಾದ ಅಲಸಂದೆ, ಹೆಸರು, ಉದ್ದು  ಮತ್ತು ಮೇವಿನ ಬೆಳೆಗಳಾದ ಆಫ್ರಿಕನ್ ಟಾಲ್ ಮುಸುಕಿನ ಜೋಳ ಅಥವಾ ಮೇವಿನ ಜೋಳಗಳನ್ನು ಈ ಹಂತದಲ್ಲಿ ಬೆಳೆಯಲು ಕೋರಿದೆ.
ಸಭೆಯಲ್ಲಿ ರೈತ ಪ್ರತಿನಿಧಿಗಳಾದ ಕೆ.ಟಿ. ಗಂಗಾಧರ್, ಎಚ್.ಆರ್.ಬಸವರಾಜಪ್ಪ, ತೇಜಸ್ವಿ ಪಟೇಲ್, ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಎಂಜಿನಿಯರ್ ಫಣಿರಾಜ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಮಧುಸೂದನ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಡಾ. ವಿಶ್ವನಾಥ್, ದಾವಣಗೆರೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ. ಸದಾಶಿವ, ಅಧಿಕಾರಿಗಳಾದ ಡಾ. ಮಂಜಪ್ಪ, ಭರತಪ್ಪ ಮತ್ತಿತರರು ಇದ್ದರು.
ಪರಿಸ್ಥಿತಿ ಇದು: ಕಾಡಾ ಆಡಳಿತಾಧಿಕಾರಿ ಅಣ್ಣಯ್ಯ ಜಲಾಶಯದ ಪರಿಸ್ಥಿತಿ ಬಗ್ಗೆ ವಿವರಿಸಿ ನಾಲೆಗೆ ನೀರು ಹರಿಸುವುದು ಅಸಾಧ್ಯ ಎಂಬುದನ್ನು ಗಮನಕ್ಕೆ ತಂದರು. ಎಡನಾಲೆ ಅಚ್ಚುಕಟ್ಟು ಪ್ರದೇಶಕ್ಕೆ ನೀರು ಹರಿಸಬಹುದಾದ ಅವಕಾಶ ಇರುವುದರಿಂದ ಈ ನಾಲೆಗಾದರೂ ನೀರು ಹರಿಸಬೇಕೆಂಬ ಎಂದು ಈ ಭಾಗದ ಪ್ರತಿನಿಧಿಗಳು ಪ್ರಸ್ತಾಪಿಸಿದರು.
ಆದರೆ, ಎಡನಾಲೆಗೆ ಹರಿಸಿದರೆ ಮುಂದೆ ಕುಡಿಯುಲು ಬಲದಂಡೆ ನಾಲೆ ನೀರನ್ನೇ ಆಶ್ರಯಿಸಿರುವ ಹಲವು ಪಟ್ಟಣ ಮತ್ತು ನಗರಗಳಲ್ಲಿ ಕುಡಿಯುವ ನೀರಿಗೂ ಅಭಾವ ಸೃಷ್ಟಿಯಾಗುತ್ತದೆ. ಇರುವ ಅಲ್ಪಸ್ವಲ್ಪ ನೀರನ್ನು ನಾಲೆಗೆ ಹರಿಸುವುದು ಬೇಡ ಎಂಬ ಚರ್ಚೆಯೂ ಬಂತು. ಸುದೀರ್ಘ ಚರ್ಚೆಯ ನಂತರ, ನಾಲೆಗಳಿಗೆ ನೀರು ಹರಿಸಲು ಜಲಾಶಯದ ನೀರಿನ ಮಟ್ಟ ಕನಿಷ್ಠ 145 ಅಡಿಗೆ ಬರುವವರೆಗೂ ಕಾಯುವುದು ಒಳ್ಳೆಯದು ಎಂಬ ಅಭಿಪ್ರಾಯ ಸಭೆಯಲ್ಲಿ ಮೂಡಿಬಂತು.
ಹವಾಮಾನ ತಜ್ಞರ ಪ್ರಕಾರ ಇನ್ನೊಂದು ವಾರದಲ್ಲಿ ಮಳೆಯಾಗಬಹುದು. ಮುಂದಿನ ದಿನಗಳಲ್ಲಿ ಬರಬಹುದಾದ ನೀರು ಮತ್ತು ಲಭ್ಯತೆ ನೋಡಿಕೊಂಡು ನೀರು ಹರಿಸುವ ತೀರ್ಮಾನ ಕೈಗೊಳ್ಳಬಹುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ಜಲಾಶಯದ ನೀರಿನ ಮಟ್ಟ
ಗರಿಷ್ಠ ಮಟ್ಟ......................186 ಅಡಿ
ಸೋಮವಾರ.........................139.7
ಸಂಗ್ರಹ.......................26.6 ಟಿಎಂಸಿ
ಬಳಸಲಾಗದ ಸಂಗ್ರಹ....13.83 ಟಿಎಂಸಿ
ಉಳಿಯುವುದು......12.8 ಟಿಎಂಸಿ ಮಾತ್ರ
ಕುಡಿವ ನೀರಿಗೆ ಬೇಕಿರುವುದು....6 ಟಿಎಂಸಿ
ಕೃಷಿಗೆ ಉಳಿಯುವುದು.........6.8 ಟಿಎಂಸಿ
ತೀರ್ಮಾನಗಳು
ಟಿ ನಾಲೆಗಳಿಗೆ ನೀರು ಹರಿಯುವುದಿಲ್ಲ
ಟಿ ಬತ್ತ ಬೆಳೆಯುವುದು ಬೇಡ
ಟಿ ಜು.26ಕ್ಕೆ ಮತ್ತೆ ಸಲಹಾ ಸಮಿತಿ ಸಭೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement