ಹೊಸ ರೈಲ್ವೆ ಮಾರ್ಗ ತೀರ್ಥಹಳ್ಳಿ ಮೂಲಕವೇ ಆಗಲಿ
ತೀರ್ಥಹಳ್ಳಿ: ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ಶಿವಮೊಗ್ಗ-ಶೃಂಗೇರಿ-ಮಂಗಳೂರು ಮಾರ್ಗಕ್ಕೆ ಹೊಸ ಸಮೀಕ್ಷೆ ಮಾಡುವ ಯೋಜನೆ ಸ್ವಾಗತಾರ್ಹ. ಈ ಮಾರ್ಗ ತೀರ್ಥಹಳ್ಳಿಯ ಮೂಲಕವೇ ಆಗಲಿ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ, ಮಲೆನಾಡು ಸಂಘರ್ಷ ಸಮಿತಿಯ ಪದಾಧಿಕಾರಿ ನೆಂಪೆ ದೇವರಾಜ್ ಒತ್ತಾಯಿಸಿದ್ದಾರೆ.
ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ತಾಲೂಕು ಶ್ರೀಮಂತವಾಗಿದ್ದರೂ ಆರ್ಥಿಕ ಪ್ರಗತಿ ಮಾತ್ರ ಈ ತಾಲೂಕಿನಲ್ಲಿ ಸಾಧ್ಯವಾಗಿಲ್ಲ. ಯಾವುದೇ ಅಭಿವೃದ್ಧಿಪರ ಯೋಜನೆಗಳೂ ಅನುಷ್ಠಾಗೊಂಡಿಲ್ಲ.
ಇಲ್ಲಿಯ ಯುವಕರು ಉದ್ಯೋಗ ಅರಸಿ ದೂರದ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಹಾಗಾಗಿ ಈಗ ಉದ್ದೇಶಿತ ರೈಲು ಮಾರ್ಗ ತೀರ್ಥಹಳ್ಳಿ ಮೂಲಕವೇ ಶೃಂಗೇರಿ ತಲುಪುವಂತಾಗಲಿ. ತಾಲೂಕಿನ ಪ್ರವಾಸೋದ್ಯಮದ ದೃಷ್ಠಿಯಿಂದಲೂ ಇದು ಒಳ್ಳೆಯದೇ ಎಂದು ದೇವರಾಜ್ ಹೇಳಿದ್ದಾರೆ.
ದಾಖಲೆ ಸಮೇತ ಪ್ರಕಟವಾದ ಕನ್ನಡ ಪ್ರಭದ ಸಕಾಲಿಕ ವರದಿ ತಾಲೂಕಿನ ಪ್ರಜ್ಞಾವಂತರ ಕಣ್ಣು ತೆರೆಸಿದೆ ಎಂದು ಹೇಳಿದ ಅವರು ಈ ಬಗ್ಗೆ ಸಮಿತಿ ಕೂಡಲೇ ಕಾರ್ಯಪ್ರವೃತ್ತವಾಗಲಿದೆ ಎಂದು ಹೇಳಿದರು.