ಗಿಡ ನೆಟ್ಟು ಮಕ್ಕಳಂತೆ ಪೋಷಿಸಿ: ನ್ಯಾ.ಸಮೀವುಲ್ಲಾ
ಹೊಸನಗರ: ಗಿಡಮರಗಳ ನಾಶದಿಂದಾಗಿ ಮರಳುಗಾಡಾಗುವ ಭೀತಿ ಒಂದೆಡೆಯಾದರೆ, ನಿಗದಿತ ಪ್ರಮಾಣದಲ್ಲಿ ಮಳೆಯಾಗದೇ ಅಂತರ್ಜಲ ಬತ್ತಿ ಹೋಗಿ ಕುಡಿಯಲು ನೀರೂ ಸಹ ಸಿಗದಂತಹ ದುಸ್ಥಿತಿ ಇಂದಿನ ದುರಂತ. ಹಾಗಾಗಿ ಉತ್ತಮ ಪರಿಸರಕ್ಕಾಗಿ, ಭವಿಷ್ಯದ ಪೀಳಿಗೆಗಾಗಿ ಗಿಡ, ನೆಟ್ಟು ತಮ್ಮ ಮಕ್ಕಳಂತೆ ಬೆಳೆಸಿ ಉಳಿಸಿ ಪೋಷಿಸುವ ಹೊಣೆಗಾರಿಕೆ ಪ್ರತಿಯೊಬ್ಬ ನಾಗರೀಕನದ್ದಾಗಿದೆ ಎಂದು ಹೊಸನಗರ ಜೆಎಂಎಫ್ಸಿ ನ್ಯಾಯಾಧೀಶ ಸಮೀವುಲ್ಲಾ ಹೇಳಿದರು.
ಪೊಲೀಸ್ ಇಲಾಖೆ, ಕಾನೂನು ಸಾಕ್ಷರತಾ ಸಮಿತಿ ಇಲ್ಲಿನ ಪೊಲೀಸ್ ಠಾಣೆ ಆವರಣದಲ್ಲಿ ಸಂಯುಕ್ತವಾಗಿ ಆಯೋಜಿಸಿದ್ದ ವನ ಮಹೋತ್ಸವ ಸಪ್ತಾಹ ಅಂಗವಾಗಿ ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದರು.
ಇನ್ನೋರ್ವ ನ್ಯಾಯಾಧಿಛಶ ಯೋಗೀಶ್ ಮಾತನಾಡಿ, ಆದಷ್ಟು ಫಲ ನೀಡುವ ಗಿಡಗಳನ್ನು ನೆಡುವುದರಿಂದ ಪ್ರಾಣಿ ಪಕ್ಷಿಗಳಿಗೆ ಆಸರೆ ಕಲ್ಪಿಸಿದ ಪುಣ್ಯ ನಮಗೆ ಲಭಿಸುತ್ತದೆ. ಮಕ್ಕಳಲ್ಲಿ ಗಿಡಮರಗಳಿಂದಾಗುವ ಪ್ರಯೋಜನ, ಪರಿಸರ ಮೇಲಾಗುವ ಪ್ರಭಾವ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್ಐ ಮಂಜುನಾಥ್, ಎಎಸ್ಐ ಸಣ್ಣಯ್ಯ, ಕೋರ್ಟ್ ಶಿರಸ್ತೆದಾರ್ ಬಾಲಚಂದ್ರ ಭಟ್ ಉಪಸ್ಥಿತರಿದ್ದರು.