ರಾಜ್ಯ ಸರ್ಕಾರದ ದುರಾಡಳಿತ ವಿರುದ್ಧ ಬಿಜೆಪಿ ಯುವ ಮೋರ್ಚಾ ಜನಜಾಗೃತಿ
ಸಾಗರ: ರಾಜ್ಯ ಸರ್ಕಾರದ ದುರಾಡಳಿತದ ವಿರುದ್ಧ ಬಿಜೆಪಿ ಯುವಮೋರ್ಚಾ ಜನಜಾಗೃತಿ ಮೂಡಿಸುವ ಕೆಲಸ ಮಾಡಲಿದೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿವೇಕ್ ಮತ್ತೂರು ಹೇಳಿದರು.
ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ತಾಲೂಕು ಯುವಮೋರ್ಚಾ ಕಾರ್ಯಕರ್ತರ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಮುಖ್ಯಮಂತ್ರಿ ಸಿದ್ಧರಾಮಯ್ಯ ಗೂಂಡಾಗಿರಿಗೆ ಪರೋಕ್ಷ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಜೆಡಿಎಸ್ ಸಂಪೂರ್ಣ ನಿಷ್ಕ್ರಿಯವಾಗಿದ್ದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೇಲ್ಮನೆಗೆ ಆಯ್ಕೆ ಮಾಡಲು ತಮ್ಮ ಮುಖಂಡರಿಂದಲೇ ರು. 40 ಕೋಟಿ ಹಣ ಬೇಡಿಕೆ ಇಟ್ಟಿರುವುದು ಪಕ್ಷ ನೈತಿಕ ಅಧಃಪತನಕ್ಕೆ ಕುಸಿದಿರುವುದಕ್ಕೆ ಸಾಕ್ಷಿ. ಯುವಜನರ ಪರವಾಗಿ ಧ್ವನಿ ಎತ್ತಬೇಕಾದ ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಮೌನ ಖಂಡನೀಯ ಎಂದರು.
ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್.ಡಿ.ಎ. ಸರ್ಕಾರದ ಅವಧಿ ಭಾರತದ ಪಾಲಿನ ಸುವರ್ಣಯುಗ. ನಂತರ 10 ವರ್ಷ ಆಳ್ವಿಕೆ ನಡೆಸಿದ ಯುಪಿಎ ಸರ್ಕಾರ ದೇಶವನ್ನು ದಿವಾಳಿತನಕ್ಕೆ ಕೊಂಡೊಯ್ದಿತು. ಈಗ ನರೇಂದ್ರ ಮೋದಿಯವರ ದೂರದರ್ಶಿತ್ವ ಆಡಳಿತ ದೇಶದ ಎಲ್ಲ ವರ್ಗದ ಜನರ ಹಿತಕಾಯುವಲ್ಲಿ ಯಶಸ್ವಿಯಾಗಲಿದೆ ಎಂದು ಹೇಳಿದರು.
ಯುವಮೋರ್ಚಾ ಗ್ರಾಮಾಂತರ ಘಟಕದ ಅಧ್ಯಕ್ಷ ಎಲ್.ವಿ.ಅಕ್ಷರ ಅಧ್ಯಕ್ಷತೆ ವಹಿಸಿದ್ದರು. ಯುವಮೋರ್ಚಾ ನಗರ ಘಟಕದ ಅಧ್ಯಕ್ಷ ರಾಜು ಬಿ.ಮಡಿವಾಳ, ಉಪಾಧ್ಯಕ್ಷ ಅಶೋಕ ಬೇಳೂರು, ಜಿಲ್ಲಾಧ್ಯಕ್ಷ ಭವಾನಿ ಆರ್. ಮೋರೆ, ಪ್ರಧಾನ ಕಾರ್ಯದರ್ಶಿ ಸುನೀಲ್ ರೊನಾಲ್ಡೋ, ಶಾಯಿವರ್ ಪ್ರಸಾದ್, ರಾಜ್ಯ ಕಾರ್ಯದರ್ಶಿ ಹೃಷಿಕೇಶ ಪೈ, ಬಿಜೆಪಿ ಗ್ರಾಮಾಂತರ ಘಟಕದ ಅಧ್ಯಕ್ಷ ಚೇತನರಾಜ್ ಕಣ್ಣೂರು, ನಗರ ಘಟಕದ ಅಧ್ಯಕ್ಷ ಸತೀಶಬಾಬು, ಪ್ರಧಾನ ಕಾರ್ಯದರ್ಶಿ ರವೀಶ್, ವ.ಶಂ. ರಾಮಚಂದ್ರ ಭಟ್ಟ ಹಾಜರಿದ್ದರು.