ಧುಮ್ಮಿಕ್ಕಿದ ಬಾಳೆಬರೆ ಜಲಪಾತ
ಹೊಸನಗರ: ಜೂನ್‌ನಿಂದ ಎದುರಿಸಿದ್ದ ಮಳೆಯ ಬರಕ್ಕೆ ಪುನರ್ವಸು ಬ್ರೇಕ್ ಹಾಕಿದ್ದು ಕಳೆದ ಮೂರು ದಿನಗಳಿಂದ ಲಿಂಗನಮಕ್ಕಿ ಶರಾವತಿ ಮತ್ತು ವಾರಾಹಿ ಹಿನ್ನೀರ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ನೀರಿಲ್ಲದೆ ಬಣಗುಟ್ಟಿದ್ದ ಹಿನ್ನೀರು ಪ್ರದೇಶ ಮತ್ತೆ ಜೀವಕಳೆ ಪಡೆದುಕೊಂಡಿದೆ. ಜಮೀನುಗಳಲ್ಲಿ ನೀರು ತುಂಬಿ ಕೊಂಡಿದ್ದು ಕೃಷಿ ಚಟುವಟಿಕೆಯಲ್ಲಿ ರೈತರು ಬಿರುಸಾಗುವಂತೆ ಮಾಡಿದೆ.
ಮಳೆಯ ವಿವರ: ಅತಿಹೆಚ್ಚು ಮಳೆ ಬೀಳುವ ಪ್ರದೇಶವಾದ ಹುಲಿಕಲ್‌ನಲ್ಲಿ ಅತೀ ಹೆಚ್ಚು 131 ಮಿ.ಮೀ. ಮಳೆಯಾಗಿದೆ. ಮಾಣಿ ಜಲಾಶಯ ವ್ಯಾಪ್ತಿಯಲ್ಲಿ 122, ಯಡೂರಿನಲ್ಲಿ 101 ಮಿ.ಮೀ. ಮಾಸ್ತಿಕಟ್ಟೆಯಲ್ಲಿ 117 ಮಿ.ಮೀ. ಮಳೆ ಸುರಿದಿದೆ.
ಇನ್ನು ಶರಾವತಿ ಹಿನ್ನೀರು ಪ್ರದೇಶವಾದ ಮತ್ತಿಮನೆಯಲ್ಲಿ 103 ಮಿ.ಮೀ. ಶಂಕಣ್ಣ ಶ್ಯಾನುಬೋಗ್ ಗ್ರಾಪಂ ವ್ಯಾಪ್ತಿಯಲ್ಲಿ 71 ಮಿಮೀ, ತುಮರಿ ಭಾಗದಲ್ಲಿ 82 ಮಿಮೀ, ಖೈರಗುಂದ್ ಗ್ರಾಪಂ ವ್ಯಾಪ್ತಿಯಲ್ಲಿ 197 ಮಿಮೀ, ಕರಿಮನೆ ಗ್ರಾಪಂ ವ್ಯಾಪ್ತಿಯಲ್ಲಿ 99 ಮಿಮೀ ಮಳೆ ಸುರಿದಿದೆ. ನಗರ, ಕಾರಗಡಿ ಅರೋಡಿ ಬಹುತೇಕ ಕಡೆ ಸರಾಸರಿ 100 ಮಿಮೀ ಮಳೆ ಸುರಿದೆ.
ಧುಮ್ಮಿಕ್ಕಿದ ಬಾಳೆಬರೆ: ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹುಲಿಕಲ್ ಘಾಟ್‌ನಲ್ಲಿ ಬರುವ ಬಾಳೆಬರೆ ಜಲಪಾತ ಧುಮ್ಮಿಕ್ಕುತ್ತಿದೆ. ನೇರವಾಗಿ ಹೆದ್ದಾರಿಗೆ ಧುಮುಕುವ ಜಲಧಾರೆ ಪ್ರತಿ ವರ್ಷದಂತೆ ಮತ್ತೆ ಪ್ರಯಾಣಿಕರ ಮನಸೂರೆಗೊಳ್ಳುತ್ತಿದೆ.
ಕೋತಿ ಸಾವು: ತಾಲೂಕಿನಾದ್ಯಂತ ಸುರಿಯುತ್ತಿರುವ ವರ್ಷಧಾರೆಗೆ ಮಾರುತಿಪುರ ಅಂಬೇಡ್ಕರ್ ಕಾಲೋನಿ ಬಳಿಯ ಬೃಹತ್ ಮಾವಿನಮರ ಧರೆಗುರುಳಿದೆ. ಮರದಲ್ಲಿದ್ದ ಕೋತಿಯೊಂದು ಮರ ಬೀಳುವ ರಭಸಕ್ಕೆ ಅಲ್ಲೆ ಸಾವು ಕಂಡಿದೆ. ಪುರೋಹಿತ ಸುಬ್ರಹ್ಮಣ್ಯ ಭಟ್ ನೇತೃತ್ವದಲ್ಲಿ ಕೋತಿಯ ಅಂತ್ಯಕ್ರಿಯೆ ನಡೆಸಲಾಯಿತು. ಭಾಸ್ಕರ ಶೆಟ್ಟಿ ನೇತೃತ್ವದಲ್ಲಿ ಸ್ಥಳೀಯರು ಮರವನ್ನು ಕಡಿದು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.