ಕುಸಿಯುತ್ತಿದೆ ಮಂಡಗದ್ದೆ ನಡುಗಡ್ಡೆ
ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ: ಮಂಡಗದ್ದೆ ಪಕ್ಷಿಧಾಮದ ನೆಲ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಸ್ಥಳಾವಕಾಶ ಕಡಿಮೆಯಾಗುತ್ತಿದೆ. ವಿದೇಶಿ ಬಾನಾಡಿಗಳಿಗೆ ನಮ್ಮ ನೆಲದ ಜಡ್ಡುಗಟ್ಟಿದ ಪರಿಸ್ಥಿತಿ ಗೊತ್ತಿಲ್ಲವೇನೋ, ಪ್ರತಿವರ್ಷ ಸಂತಾನಾಭಿವೃದ್ಧಿಗೆಂದು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಲೇ ಇವೆ.
ಪ್ರತಿ ಬಾರಿ ಪ್ರವಾಹ ಹೆಚ್ಚಾದಾಗ ನಡುಗಡ್ಡೆ ಮಣ್ಣು ಕೊರೆಯುತ್ತಿದೆ. ಕಳಸ, ಹೊರನಾಡು, ತೀರ್ಥಹಳ್ಳಿ ಸುತ್ತಮುತ್ತ ಭಾರಿ ಮಳೆಯಾಗುತ್ತದಂತೆ ಹರಿದು ಬರುವ ಸಾವಿರಾರು ಕ್ಯುಸೆಕ್ ನೀರಿನೊಂದಿಗೆ ನಡುಗಡ್ಡೆ ಸವೆಯುವ ಜತೆಗೆ ಪಕ್ಷಿಧಾಮದ ಕೆಳಸ್ಥರದಲ್ಲಿರುವ ಗೂಡುಗಳನ್ನು ಕೊಚ್ಚಿಕೊಂಡು ಹೋಗುತ್ತಿದೆ. ಅರಣ್ಯ ಇಲಾಖೆ ಹಾಗೂ ತುಂಗಾ ಮೇಲ್ದಂಡೆ ಯೋಜನೆ ಕಚೇರಿ ಈ ಬಗ್ಗೆ ಗಂಭೀರವಾಗಿ ಚಿಂತಿಸದಿದ್ದರೆ ಇನ್ನು ಕೆಲ ವರ್ಷಗಳಲ್ಲಿ ನಡುಗಡ್ಡೆಯೇ ಇಲ್ಲವಾಗಬಹುದು.
ಸಾವಿರಾರು ಗೂಡುಗಳು ನೀರು ಪಾಲು: ಈ ಬಾರಿ ಪರಿಸ್ಥಿತಿ ಭಿನ್ನವಾಗೇನೂ ಇಲ್ಲ. ನಡುಗಡ್ಡೆ ಮೇಲೆ ಒಂದು ಅಡಿ ಎತ್ತರದಲ್ಲಿ ನೀರು ಹರಿಯುತ್ತಿದೆ. ತಿಂಗಳಿಂದ ನಿಧಾನಗತಿಯಲ್ಲಿ ಮಳೆ ಬಿರುಸು ಪಡೆದಿದ್ದರಿಂದ ತುಂಗಾ ನದಿಯಲ್ಲಿ ಭಾರಿ ಪ್ರವಾಹ ಬಂದಿದೆ. ನಡುಗಡ್ಡೆಯ ಮರಗಳ ಕೆಳಸ್ಥರದಲ್ಲಿ ಕಟ್ಟಿದ್ದ ವಿದೇಶಿ ಹಕ್ಕಿಗಳ ಸಾವಿರಾರು ಗೂಡುಗಳು ನೀರು ಪಾಲಾಗಿವೆ.
ಸಾವಿರಾರು ಕಿ.ಮೀ. ದೂರದ ಸೈಬೀರಿಯಾದಿಂದ ಸರಿಸುಮಾರು 5 ಸಾವಿರ ಹಕ್ಕಿಗಳು ದಾರಿ ತಪ್ಪದೆ ಪ್ರತಿ ವರ್ಷ ಮಂಡಗದ್ದೆಗೆ ಆಗಮಿಸುತ್ತವೆ. ಬೆಳ್ಳಕ್ಕಿ, ಹಾವಕ್ಕಿ, ನೀರುಕಾಗೆಗಳ ಕಲರವದ ನೆಲ ಇದು. ಆದರೆ ಕೆಲ ವರ್ಷಗಳಿಂದ ಈಚೆಗೆ ಬರುತ್ತಿರುವ ಪಕ್ಷಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಮಂಡಗದ್ದೆಯ ನಿವಾಸಿಗಳು ಗಮನಿಸುತ್ತಿದ್ದಾರೆ. ಮೊದಲೆಲ್ಲ ಒಂದು ಮರದಲ್ಲಿ ಬುಡದಿಂದ ತುದಿಯವರೆಗೂ ಗೂಡುಗಳಿರುತ್ತಿದ್ದವು. ಈಗ ಇಲ್ಲ. ಖಂಡಿತವಾಗಿಯೂ ಪಕ್ಷಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುತ್ತಾರೆ ನಿವಾಸಿಗಳು.
ಪ್ರಯತ್ನಗಳು: ಹಿಂದೊಮ್ಮೆ ಅರಣ್ಯ ಇಲಾಖೆ ನಡುಗಡ್ಡೆ ಕೊರೆತ ತಪ್ಪಿಸಲು ತಡೆಗೋಡೆ ಕಟ್ಟುವ ಪ್ರಯತ್ನ ಮಾಡಿತ್ತು. ಸುಮಾರು 8 ವರ್ಷಗಳ ಹಿಂದೆ ಇಲ್ಲಿದ್ದ ಆರ್ಎಫ್ಓ ಮಂಜುನಾಥ್ ಅವರು ಈ ಕೆಲಸ ಮಾಡಿದ್ದರು. ಈಗ ಗೋಡೆಯ ಕಲ್ಲುಗಳೇ ಉದುರಿಹೋಗುತ್ತವೆ. ಇದಾದ ನಂತರ ನಡುಗಡ್ಡೆ ಉಳಿಸುವ ಯಾವ ಪ್ರಯತ್ನಗಳೂ ನಡೆದಿಲ್ಲ. ತುಂಗಾ ಮೇಲ್ದಂಡೆ ಯೋಜನೆ ರೂಪಿಸಿದಾಗ ದಶಕಗಳ ಹಿಂದೆ ಮಂಡಗದ್ದೆ ಪುನರ್ವಸತಿಗೆಂದು ಮೀಸಲಿಟ್ಟಿದ್ದ ರು. 22 ಲಕ್ಷ ಅನುದಾನ ಏನಾಯಿತು ಎಂದು ಯಾರಿಗೂ ಗೊತ್ತಿಲ್ಲ.