ಶಿಕಾರಿಪುರ ಸರ್ಕಾರಿ ಆಸ್ಪತ್ರೆ ಸ್ವಚ್ಛತಾ ಸಿಬ್ಬಂದಿ ಉಪವಾಸ ಸತ್ಯಾಗ್ರಹ
ಶಿಕಾರಿಪುರ: ಪಟ್ಟಣದ ಜಿಲ್ಲಾ ಆಸ್ಪತ್ರೆಯ ಸ್ವಚ್ಚತಾ ಸಿಬ್ಬಂದಿ ಸೋಮವಾರ ಬೆಳಗಿನಿಂದ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. 150 ಕ್ಕೂ ಅಧಿಕ ಹಾಸಿಗೆಯ ಜಿಲ್ಲಾ ಆಸ್ಪತ್ರೆಗೆ ಕನಿಷ್ಠ 15 ಸ್ವಚ್ಚತಾ ಸಿಬ್ಬಂದಿ ಅಗತ್ಯವಿದ್ದು ಸಮೀಪದ ಹೊನ್ನಾಳಿಯ ಗುತ್ತಿಗೆದಾರ ಆಸೀಫುಲ್ಲಾ 13 ಸಿಬ್ಬಂದಿ ಮೂಲಕ ಸತತ 3 ವರ್ಷದಿಂದ ಸಚ್ಛತಾ ನಡೆಸುತ್ತಿದ್ದಾರೆ.
ಮಾಸಿಕ ರು. 1.5 ಲಕ್ಷಕ್ಕೆ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಕಾರ್ಮಿಕ ಇಲಾಖೆ ಪ್ರತಿ ಸಿಬ್ಬಂದಿಗೆ ಮಾಸಿಕ ರು. 5600 ನಿಗದಿಪಡಿಸಿದರೂ ಕೇವಲ ರು. 4 ಸಾವಿರ ಬ್ಯಾಂಕ್ ಖಾತೆಗೆ ಜಮಾಗೊಳಿಸದೆ ನಗದು ನೀಡುವ ಮೂಲಕ ಇಲಾಖೆಯ ಕಾನೂನು ಮೀರಿ ವರ್ತಿಸುತ್ತಿದ್ದಾರೆ ಎಂದು ಸಿಬ್ಬಂದಿ ಸುನೀತಾ ಆರೋಪಿಸಿದ್ದಾರೆ.
ಇದರೊಂದಿಗೆ ನಿವೃತ್ತಿ ನಂತರದ ಸೌಲಭ್ಯ ಪಿಎಫ್ ಖಾತೆಗೆ ಇದುವರೆಗೂ ಹಣ ಪಾವತಿಸದ ಬಗ್ಗೆ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ತಿಪ್ಪೇಶ್‌ಗೆ ಹಲವು ಬಾರಿ ದೂರು ನೀಡಿದರೂ ಸಮಸ್ಯೆಗೆ ಪರಿಹಾರವಾಗಿಲ್ಲ ಎಂದರು.
ಸಿಬ್ಬಂದಿ ನಾಗರಾಜ್ ಮಾತನಾಡಿ, ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಕನಿಷ್ಠ ಸೌಜನ್ಯಕ್ಕಾದರೂ ಜಿಲ್ಲಾ ಶಸ್ತ್ರಚಿಕಿತ್ಸಕರು, ಗುತ್ತಿಗೆದಾರ ಸುಳಿಯದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.
ಈ ಸಂದರ್ಭದಲ್ಲಿ ಪರಶುರಾಮ, ರತ್ನಮ್ಮ, ಶೋಭಾ, ಕವಿತಾ, ಲಕ್ಷ್ಮಮ್ಮ, ಶಾರದಮ್ಮ, ಗಿರಿಜಮ್ಮ, ಚಂದ್ರಮ್ಮ,ನೇತ್ರಾವತಿ ಮತ್ತಿತರರು ಹಾಜರಿದ್ದರು.