ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೃಷಿಭೂಮಿಗೆ ಬಂಜೆತನ ತರುವ ಶುಂಠಿ

Rashmi Kasaragodu
Updated On : 18 Jul 2014, 11:03 am

ಬೆಳೆಗೆ ಹೆಚ್ಚಿನ ಕ್ರಿಮಿನಾಶಕ ಬಳಕೆ ಟಿ ಕುಡಿವ ನೀರು ಕೂಡಾ ವಿಷಮಯ ಟಿ ವೃಕ್ಷಲಕ್ಷ ಆಂದೋಲನದ ಸಮೀಕ್ಷಾ ವರದಿ


ಶಿವಮೊಗ್ಗ: ಪಶ್ಚಿಮಘಟ್ಟದಲ್ಲಿ ಪರಿಸರ ಜಾಗೃತಿ, ಜನಾಂದೋಲನ ಅಧ್ಯಯನಗಳಲ್ಲಿ 31 ವರ್ಷಗಳಿಂದ ತೊಡಗಿಸಿ ಕೊಂಡಿರುವ ವೃಕ್ಷಲಕ್ಷ ಆಂದೋಲನವು ಮಲೆನಾಡಿನಲ್ಲಿ 'ಶುಂಠಿ ಬೆಳೆ- ಅಪಾರ ಕ್ರಿಮಿನಾಶಕ ಬಳಕೆ- ಕೃಷಿ ಭೂಮಿ ಬಂಜರಾಗುವ ಆಪತ್ತು, ಕುಡಿಯುವ ನೀರು ವಿಷಮಯ' ಎಂಬ ವಿಶೇಷ ಸಮೀಕ್ಷಾ ವರದಿಯನ್ನು ಪ್ರಕಟಿಸಿದೆ.
ವರದಿಯ ಮುಖ್ಯಾಂಶ: ಮಲೆನಾಡಿನ ಎಲ್ಲ ತಾಲೂಕುಗಳೂ ಶುಂಠಿ ಬೆಳೆಯುವ ಪ್ರದೇಶಗಳಾಗಿವೆ. ಅರೆಮಲೆನಾಡಲ್ಲೂ ಶುಂಠಿ ಬೆಳೆಗೆ ಅತಿಯಾದ ಕ್ರಿಮಿನಾಶಕ ಬಳಕೆ ಇದೆ.
ಚಿಕ್ಕಮಗಳೂರು, ತರೀಕೆರೆ, ಲಕ್ಕವಳ್ಳಿ, ಬೇಲೂರು, ಮುಂಡಗೋಡ, ಹಳಿಯಾಳದಂಥ ಅರೆಮಲೆನಾಡು ಪ್ರದೇಶಗಳಿಗೆ ಶುಂಠಿ ಬೇಸಾಯ ಬಹಳ ವ್ಯಾಪಿಸಿದೆ.
ರೈತರು ಬತ್ತ ಬೆಳೆಯುವ ಗದ್ದೆಗಳಲ್ಲಿ ಶುಂಠಿ ಬೆಳೆಯಲು ತೊಡಗಿದ್ದಾರೆ. ಮಲೆನಾಡಿನ ಗದ್ದೆಗಳ ಜೊತೆ ಅರಣ್ಯ, ಕೆರೆ ಅಂಗಳಗಳಲ್ಲಿ ಶುಂಠಿಯ ಹಕ್ಕಲು ಎದ್ದು ಕಾಣುತ್ತದೆ. ಇಲ್ಲಿ ಅರಣ್ಯ ನಾಶದ ಗಂಭೀರ ಸಮಸ್ಯೆ ಇದೆ. ಅನ್ನ ಬೆಳೆಯುವ ಗದ್ದೆಗಳೆಲ್ಲ ಶುಂಠಿ ಗದ್ದೆಗಳಾಗಿವೆ ಎಂದು ಆತಂಕ ಪಡುವ ಪರಿಸ್ಥಿತಿ ಎದುರಾಗಿದೆ.
ಮೊದಲ ವರ್ಷ ಶುಂಠಿ ಬೆಳೆದ ಹಕ್ಕಲು-ಗದ್ದೆಯಲ್ಲಿ ಶುಂಠಿ ಕಿತ್ತ ನಂತರ ಮತ್ತೆ 2ನೇ ವರ್ಷ ಶುಂಠಿ ಬೆಳೆಸುವುದೇ ಇಲ್ಲ. 3 ವರ್ಷ ಹಾಗೇ ಬಿಡುತ್ತಾರೆ. ಯಾಕೆಂದರೆ ಈ ಭೂಮಿ ಬಂಜರಾಗುತ್ತದೆ.
ಇವೆಲ್ಲಕ್ಕಿಂತ ದೊಡ್ಡ ಆಘಾತ, ದುಷ್ಪರಿಣಾಮ ಇರುವುದು ಮಲೆನಾಡಿನ ಸಂಪದ್ಭರಿತ ಭೂಮಿ ಬಂಜರಾಗುತ್ತಿದೆ ಎಂಬ ವಿಷಯ. ಈ ಶುಂಠಿ ಪ್ರದೇಶಗಳೆಲ್ಲ ವಿಷಮಯವಾಗುತ್ತಿವೆ ಎನ್ನುವ ಸಂಗತಿ.
ಶುಂಠಿ ಬೆಳೆಸಲು ಅಪಾರ ಪ್ರಮಾಣದ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕ ಕ್ರಿಮಿನಾಶಕ ಬಳಸಲಾಗುತ್ತಿದೆ. ಇದರಿಂದ ಕೃಷಿಭೂಮಿಯಲ್ಲಿ ಸೂಕ್ಷ್ಮಾಣು ಜೀವಿಗಳು ಸಾಯುತ್ತವೆ, ಫಲವತ್ತತೆ ಕಳೆದುಕೊಳ್ಳುತ್ತವೆ. ರಾಸಾಯನಿಕಗಳು ಹಳ್ಳ, ಕೆರೆಗಳನ್ನು ಬಾವಿಗಳನ್ನು ಸೇರುತ್ತಿವೆ. ವರದಾ, ಕುಮದ್ವತಿ, ತುಂಗಾ, ಭದ್ರಾ ನದಿಗಳ ನೀರು ಅಶುದ್ಧವಾಗಿವೆ. ಇದಕ್ಕೆ ಕಡಿವಾಣ ಇಲ್ಲ, ನಿಯಂತ್ರಣ ಇಲ್ಲ, ಕೀಟನಾಶಕ ಸಿಂಪಡಣೆಗೆ ಮಾಹಿತಿ, ಮಾರ್ಗದರ್ಶನ ಇಲ್ಲವೇ ಇಲ್ಲ.
ಕೃಷಿ ವಿಶ್ವವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಇವು ಮಾಡಬೇಕಾದ ಕೆಲಸ ಇದಾಗಿತ್ತು. ಆದರೆ ಮಾಡಿಲ್ಲ. ಹಳ್ಳ-ಕೆರೆಗಳಲ್ಲಿ ಮೀನು-ಏಡಿ, ಕಪ್ಪೆಗಳೇ ಕಣ್ಮರೆ ಆಗುತ್ತಿವೆ. ಕುರಿಗಳ, ದನದ ಹಿಂಡು ಶುಂಠಿ ಬೆಳೆದ ಗದ್ದೆಗಳಲ್ಲಿ ಬೆಳೆ ತೆಗೆದ ಮೇಲೆ ಮೇಯಲು ಬರುವುದಿಲ್ಲ ಎಂದು ರೈತರೇ ಹೇಳುತ್ತಾರೆ.
ಕ್ರಿಮಿನಾಶಕ ಸಿಂಪಡಣೆ ಮಾಡಿದ ಕಾಡಿನ ಪ್ರದೇಶ, ಕೃಷಿ ಭೂಮಿ ಹತ್ತಿರ ಜೇನುಗೂಡು ಇರುವುದಿಲ್ಲ. ಮೊದಲು ಜೇನುಗೂಡು ಕಟ್ಟಿದ್ದರೆ ಕ್ರಿಮಿನಾಶಕ ಸಿಂಪಡಣೆ ನಂತರ ಹಾರಿ ಹೋಗುತ್ತದೆ.
ಅತಿಯಾದ ರಾಸಾಯನಿಕ ಕ್ರಿಮಿನಾಶಕ  ಬಳಸುವುದರಿಂದ ಆಹಾರದ ಮೂಲಕ ನೇರವಾಗಿ ವಿಷ ಮನುಷ್ಯನ ದೇಹ ಸೇರುತ್ತದೆ. ಹಾಗೂ ಜಲಮೂಲ (ಕುಡಿಯುವ ಬಾವಿಕೆರೆ ಹಳ್ಳ) ವಿಷಪೂರಿತವಾಗಿ ಮನುಷ್ಯರ ದೇಹ ಸೇರುತ್ತದೆ. ಅಂದರೆ ಆಹಾರ ಹಾಗೂ ನೀರು ಎರಡೂ ವಿಷಪೂರಿತವಾಗುತ್ತಿದೆ.
ಎಂಡೋಸಲ್ಫಾನ್‌ನಂತಹ 34 ತೀವ್ರ ರಾಸಾಯನಿಕ, ಕೀಟನಾಶಕಗಳನ್ನು ಸರ್ಕಾರವೇ ನಿಷೇಧಿಸಿದೆ ಎಂದು ಕೃಷಿ ಇಲಾಖೆ ಅಧಿಕೃತ ಪಟ್ಟಿ ನೀಡುತ್ತದೆ. ಆದರೆ ಮಲೆನಾಡಿನಲ್ಲಿ ರಾಸಾಯನಿಕ ಕ್ರಿಮಿನಾಶಕ ಮಾರುವ ಅಂಗಡಿಗಳಲ್ಲಿ ಈ ಎಲ್ಲ ಕ್ರಿಮಿನಾಶಕಗಳು ಸಿಗುತ್ತವೆ.
ಮಲೆನಾಡಿನ ಸುಮಾರು ಒಂದು ಲಕ್ಷ ಎಕರೆ ಪ್ರದೇಶದಲ್ಲಿ ಶುಂಠಿ ಬೆಳೆಯಲಾಗುತ್ತಿದೆ. ಮಲೆನಾಡಿನ ಪ್ರತಿ ತಾಲೂಕಿನಲ್ಲಿ ಸರಾಸರಿ 5 ಸಾವಿರ ಎಕರೆ ಪ್ರದೇಶದಲ್ಲಿ ಇದು ಆವರಿಸಿಕೊಂಡಿದೆ. ಪ್ರತಿ ತಾಲೂಕಿನಲ್ಲಿ ಶುಂಠಿಗಾಗಿ 2 ಕೋಟಿ ರುಪಾಯಿಗಿಂತ ಹೆಚ್ಚು ಕ್ರಿಮಿನಾಶಕ ಮಾರಾಟ ಆಗುತ್ತಿದೆ. ಪಶ್ಚಿಮ ಘಟ್ಟದ ಕೊಡಗು, ಹಾಸನ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶುಂಠಿ ಬೆಳೆಯಿಂದ ಕೃಷಿ ಭೂಮಿ ಬಂಜರಾಗುತ್ತಿದೆ.
ಬನವಾಸಿ ಪ್ರದೇಶದಲ್ಲಿ ಒಂದು ವರ್ಷಕ್ಕೆ ಒಂದು ಲಕ್ಷ ಲೀಟರ್ ಕ್ರಿಮಿನಾಶಕ ಸಿಂಪಡಣೆ ಮಾಡುತ್ತಾರೆ. ಒಂದು ಎಕರೆಗೆ 8 ರಿಂದ 10 ಬಾರಿ ಶುಂಠಿ ಬೆಳೆಗೆ ಒಟ್ಟು 50 ಲೀಟರ್ ಕ್ರಿಮಿನಾಶಕ ಸಿಂಪಡಣೆ ಮಾಡಲಾಗುತ್ತದೆ. ಬನವಾಸಿ ಪಂಚಾಯಿತಿ ವ್ಯಾಪ್ತಿ ಒಂದರಲ್ಲೇ ಸುಮಾರು 1500 ಎಕರೆ ಕೃಷಿ ಭೂಮಿಯಲ್ಲಿ, ಬನವಾಸಿ ಅರಣ್ಯ ವಲಯದಲ್ಲಿ ಸುಮಾರು ಒಂದು ಸಾವಿರ ಎಕರೆ ಅರಣ್ಯ ಭೂಮಿಯಲ್ಲಿ ಶುಂಠಿ ಬೆಳೆ ಇದೆ.
ಈಗ ಆಗುತ್ತಿರುವ ಅವಘಡ ತಡೆಗಟ್ಟಲು ಸರ್ಕಾರ, ಜನ ಪ್ರತಿನಿಧಿಗಳು ಮುಂದಾಗಬೇಕು. ತಜ್ಞರ ಸಮಿತಿ ರಚನೆ, ಶುಂಠಿ ಬೆಳೆಯುವ ಪ್ರದೇಶದ ನಿಖರ ಮಾಹಿತಿ ಸಂಗ್ರಹ ಆಗಬೇಕು. ನಿಷೇಧಿತ ಕ್ರಿಮಿನಾಶಕಗಳ ಮಾರಾಟ ತಡೆಯಬೇಕು. ಶುಂಠಿಯನ್ನು ಸಾವಯವ ಪದ್ಧತಿಯಲ್ಲಿ ಮಾತ್ರ ಬೆಳೆಸಲು ಕ್ರಮ ಅತ್ಯವಶ್ಯ ಎಂದು ಸಂಘಟನೆ ಒತ್ತಾಯಿಸಿದೆ. ಜೊತೆಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ  ಮಧ್ಯೆ ಪ್ರವೇಶಿಸಬೇಕೆಂದು ಒತ್ತಾಯಿಸಿದೆ.
ಸಮೀಕ್ಷಾ ತಂಡದಲ್ಲಿ ವೃಕ್ಷಲಕ್ಷ ಆಂದೋಲನ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ವನ್ಯ ಜೀವಿ ಅಧ್ಯಯನಕಾರ ಬಾಲಚಂದ್ರ ಸಾಯಿಮನೆ, ಪ್ರೊ. ಬಿ.ಎಂ. ಕುಮಾರಸ್ವಾಮಿ, ವನವಾಸೀ ಮುಖಂಡ ಶಾಂತಾರಾಂ ಸಿದ್ಧಿ, ಯಡಳ್ಳಿ ಪರಿಸರ ವರ್ಧಿನಿಯ  ಜೀವವೈವಿಧ್ಯ ಅಧ್ಯಯನಕಾರ ರಮೇಶ್‌ಕಾನುಗೋಡು, ಕೃಷಿಪಂಡಿತ ಈಶಣ್ಣ ನೀನಳ್ಳಿ ಶಂಕರಣ್ಣ ಮಾಳೇನಳ್ಳಿ, ಕೃಷಿ ವೈವಿಧ್ಯ ತಳಿ ಅಧ್ಯಯನಕಾರ ರಘುನಂದನ ಭಟ್ ನಿರೂರು, ಗ್ರಾಮಾಂತರ ವಿಜ್ಞಾನ ಕೇಂದ್ರದ ಸಂಚಾಲಕ ಕೆ.ವೆಂಕಟೇಶ್, ಶರಾವತಿ ಅಭಿವೃದ್ಧಿ ಸಂಸ್ಥೆಯ ಹಕ್ರೆ ಸುಬ್ಬರಾವ್, ಪಶ್ಚಿಮಘಟ್ಟ ಉಳಿಸಿ ಆಂದೋಲನದ ಗಜೇಂದ್ರ ಗೊರಸು ಕುಡಿಗೆ, ಲೈಫ್ ಸಂಸ್ಥೆಯ ನರಸಿಂಹ ವಾನಳ್ಳಿ, ಸ್ನೇಹ ಕುಂಜದ ರವೀಂದ್ರ, ಉ.ಕ.ಜಿಲ್ಲಾ ಪರಿಸರ ಸಮಿತಿಯ ಭಾಸ್ಕರಗೇರಾಳ, ಗ್ರಾಮ ಭಾರತಿ ಹೊಸನಗರದ ರವಿ ಹನಿಯ, ವೃಕ್ಷಲಕ್ಷ ಸಂಚಾಲಕ ಗಣಪತಿ. ಕೆ. ಬಿಸ್ಲಕೊಪ್ಪ, ಭೀಮನಕೋಣೆ ರಾಘವೇಂದ್ರ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement