ಮುಂದಿನ ಪೀಳಿಗೆಗಾಗಿ ಅರಣ್ಯ ಉಳಿಸಿ: ಮಂಜುನಾಥಸ್ವಾಮಿ
ಸೊರಬ: ಪ್ರಕೃತಿಯ ಅಸಮತೋಲನದಿಂದಾಗಿ ಮಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದ್ದು, ಮುಂದಿನ ಪೀಳಿಗೆಯ ನೆಮ್ಮದಿ ಬದುಕಿಗಾಗಿ ಪಾರಂಪರಿಕ ಅರಣ್ಯ ಉಳಿಸಿ, ಬೆಳೆಸಲು ಕಂಕಣ ಬದ್ಧರಾಗಬೇಕೆಂದು ಉಪವಲಯ ಅರಣ್ಯಾಧಿಕಾರಿ ಮಂಜುನಾಥಸ್ವಾಮಿ ತಿಳಿಸಿದರು.
ಅವರು ಹರೀಶಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅರಣ್ಯ ಇಲಾಖೆ, ಗ್ರಾಮಪಂಚಾಯಿತಿ, ಅರಣ್ಯ ಸಮಿತಿ ಹರೀಶಿ ಸಂಯುಕ್ತ ಆಶ್ರಯದಲ್ಲಿ ಗುರುವಾರ ನಡೆದ ವಲಯ ಮಟ್ಟದ ಪರಿಸರ ಮಾಹಿತಿ ಹಾಗೂ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯೋಜನಾಧಿಕಾರಿ ಸತೀಶ್ ಮಾತನಾಡಿ, ಮಕ್ಕಳು ಬೆಳೆಯುವ ಹಂತದಲ್ಲಿ ಅವರಿಗೆ ಪ್ರಕೃತಿಯ ಕುರಿತಾದ ಕಾಳಜಿ, ಆಸಕ್ತಿ ಮೂಡಿಸುವ ಅನಿವಾರ್ಯತೆಯಿದೆ. ಮುಂದಿನ ದಿನಗಳಲ್ಲಿ ಇಂತಹ ಜ್ಞಾನ ನೀಡುವ ಮೂಲಕ ಪ್ರಕೃತಿ ಸಮತೋಲನವನ್ನು ಕಾಪಾಡಿಕೊಂಡು ಬರುವಲ್ಲಿ ಪ್ರೇರಕ ಶಕ್ತಿಯಾಗಲಿದೆ. ಪರಿಸರ ಹಾಗೂ ಅರಣ್ಯ ಸಂರಕ್ಷಣೆ ಬಗ್ಗೆ ಮಕ್ಕಳಲ್ಲಿ ಪ್ರಾಥಮಿಕ ಹಂತದಲ್ಲಿಯೇ ಅರಿವು ಮೂಡಿಸಬೇಕು ಎಂದು ಹೇಳಿದರು.
ಪುಷ್ಪಾವತಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆ ನಡೆಸಿ, ಪ್ರಶಸ್ತಿ ಪತ್ರ ಹಾಗೂ ಗಿಡಗಳನ್ನು ವಿತರಿಸಲಾಯಿತು.
ಶಿಕ್ಷಕ ಎಂ.ಎಂ. ಮಲ್ಲಿಕ್, ಅರಣ್ಯ ಸಮಿತಿ ಅಧ್ಯಕ್ಷ ಗಣೇಶಮೂರ್ತಿ, ವಲಯ ಒಕ್ಕೂಟ ಅಧ್ಯಕ್ಷ ಮಹಾಬಲೇಶ್ವರ್, ಸೇವಾಪ್ರತಿನಿಧಿಗಳಾದ ಲಲಿತ, ಚೇತನ, ಸುಜಾತ, ಜೀವಪ್ಪ, ಯೋಗೇಶ ಹಾಗೂ ಒಕ್ಕೂಟದ ಪದಾಧಿಕಾರಿಗಳು, ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಹಾಜರಿದ್ದರು. ಸೇವಾನಿರತ ಲಕ್ಷ್ಮೀಶ್ ಸ್ವಾಗತಿಸಿದರು. ಬಸವಣ್ಣಪ್ಪ ನಿರೂಪಿಸಿದರು.