ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ಅರ್ಜಿ
ಶಿವಮೊಗ್ಗ: ಶಿಕಾರಿಪುರ ಮತ್ತು ಸೊರಬ ತಾಲೂಕಿನ ಶಾಲೆಗಳಲ್ಲಿ 5ರಿಂದ 10ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಇಲಾಖಾ ವತಿಯಿಂದ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಮಂಜೂರು ಮಾಡಲು ಉದ್ದೇಶಿಸಿದ್ದು, ಅರ್ಹ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಅಭ್ಯರ್ಥಿಗಳು ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಾಗಿದ್ದು, ಅವರ ಪೋಷಕರ ವಾರ್ಷಿಕ ವರಮಾನ ರು. 44,500 ಮೀರಿರಬಾರದು. ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಕೇಂದ್ರ ಸರ್ಕಾರದಿಂದ 5ನೇ ತರಗತಿಗೆ ಮಾಹೆಯಾನ ರು. 25 , 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ಮಾಹೆಯಾನ ರು. 40 ಹಾಗೂ 9ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಾಸಿಕ ರು. 50 ವಿದ್ಯಾರ್ಥಿ ವೇತನ ನೀಡಲಾಗುವುದು. ಅರ್ಹ ವಿದ್ಯಾರ್ಥಿಗಳು ಶಾಲೆ ಮುಖ್ಯೋಪಾಧ್ಯಾಯರಿಂದ ಅರ್ಜಿ ಪಡೆದು, ಜಾತಿ-ಆದಾಯ ಪ್ರಮಾಣಪತ್ರ, ಕಳೆದ ಸಾಲಿನ ಅಂಕಪಟ್ಟಿ ಹಾಗೂ ಮತ್ತಿತರ ಅಗತ್ಯ ದಾಖಲೆಗಳೊಂದಿಗೆ ಸೆಪ್ಟಂಬರ್ 30ರೊಳಗಾಗಿ ಸಲ್ಲಿಸಬೇಕು. ಅನುದಾನ ರಹಿತ ಶಾಲಾ ಮುಖ್ಯೋಪಾಧ್ಯಾಯರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಅರ್ಜಿ ನಮೂನೆ ದೃಢೀಕರಿಸಿ ನೀಡಬೇಕು ಎಂದು ಶಿಕಾರಿಪುರ ಮತ್ತು ಸೊರಬ ತಾಲೂಕಿನ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ತಿಳಿಸಿದ್ದಾರೆ.