ಸುಗಮ ಸಂಗೀತ ಎಲ್ಲೆಡೆ ಪಸರಿಸಲಿ: ಡಾ. ಎಸ್. ಪರಶಿವಮೂರ್ತಿ
ಶಿವಮೊಗ್ಗ: ನಾಡಿನಾದ್ಯಂತ ಸುಗಮ ಸಂಗೀತಕ್ಕೆ ಶ್ರೋತೃಗಳು ಹೆಚ್ಚಾಗಬೇಕು. ಎಲ್ಲೆಡೆ ಸುಗಮ ಸಂಗೀತ ಪಸರಿಸಬೇಕು ಎಂದು ಪೂರ್ವ ವಲಯ ಐಜಿಪಿ ಡಾ. ಎಸ್. ಪರಶಿವಮೂರ್ತಿ ಹೇಳಿದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಜಿಲ್ಲಾ ಘಟಕ ಇಲ್ಲಿನ ರವೀಂದ್ರ ನಗರ ಪ್ರಸನ್ನ ಗಣಪತಿ ದೇವಾಲಯದಲ್ಲಿ ಆಯೋಜಿಸಿರುವ ಗೀತ ಗಾಯನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಭೆ ಬೆಳೆಸಲು ಶ್ರೋತೃವರ್ಗ ಬಹಳ ಮುಖ್ಯ. ಇತ್ತೀಚೆಗೆ ಶ್ರೋತೃವರ್ಗ ಕಡಿಮೆಯಾಗುತ್ತಿದೆ ಎಂದರು.
ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸಂಗೀತ ನೃತ್ಯಕ್ಕೆ ತನ್ನದೇ ಆದ ಶ್ರೋತೃವರ್ಗಗಳಿವೆ. ಅವುಗಳಿಂದ ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ಸಿಗುತ್ತಿದೆ ಎಂದರು.
ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ವೈ.ಕೆ.ಮುದ್ದುಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಗಾಯಕ ಗರ್ತಿಕೆರೆ ರಾಘಣ್ಣ, ಪರಿಷತ್ ಖಜಾಂಚಿ ಶ್ರೀನಿವಾಸ ಉಡುಪ, ಪ್ರಧಾನ ಕಾರ್ಯದರ್ಶಿ ಕಿಕ್ಕೇರಿ ಕೃಷ್ಣಮೂರ್ತಿ, ಮೃತ್ಯಂಜಯ ದೊಡ್ಡವಾಡ, ಸಾಲಿಗ್ರಾಮ ಗಣೇಶ್ ಶಣೈ, ಶಾಂತಾ ಎಸ್. ಶೆಟ್ಟಿ, ಅಚಲ ಎಸ್.ರಾವ್, ಪುಷ್ಪಾ ಸತೀಶ್, ಜಯಶೀಲನ್ ಪಾಲ್ಗೊಂಡಿದ್ದರು.