ಆನಂದಪುರಂ ಹೆದ್ದಾರಿಯಲ್ಲಿ ಅಪಘಾತ: ಚಾಲಕ ಸಾವು
ಸಾಗರ: ತಾಲೂಕಿನ ಆನಂದಪುರಂ ಸಮೀಪದ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಬಸ್ ಹಾಗೂ ಮ್ಯಾಕ್ಸಿಕ್ಯಾಬ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಮ್ಯಾಕ್ಸಿಕ್ಯಾಬ್ ಚಾಲಕ ಹೊನ್ನೆಗೌಡ ಬೇಗೂರು (40) ಸ್ಥಳದಲ್ಲಿಯೆ ಮೃತಪಟ್ಟಿದ್ದು, ಘಟನೆಯಲ್ಲಿ ವಿದ್ಯಾರ್ಥಿನಿಯೊಬ್ಬಳು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಜೋಗದಿಂದ ತರೀಕೆರೆಗೆ ತೆರಳುತ್ತಿದ್ದ ಗಜಾನನ ಬಸ್ ಹಾಗೂ ಬೆಂಗಳೂರಿನಿಂದ ಸಾಗರದ ಕಡೆ ಬರುತ್ತಿದ್ದ ಮ್ಯಾಕ್ಸಿಕ್ಯಾಬ್ ನಡುವೆ ಹಕ್ರೆಕೊಪ್ಪ ಬಳಿ ಡಿಕ್ಕಿ ಸಂಭವಿಸಿತು. ಅಪಘಾತದ ರಭಸಕ್ಕೆ ಕ್ಯಾಬ್ ಚಾಲಕ ಸ್ಥಳದಲ್ಲೆ ಸಾವಿಗೀಡಾದ. ಕ್ಯಾಬ್‌ನಲ್ಲಿದ್ದ ಇತರರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಚಾಲಕ ದೇವಭೂಷಣ್ ಎಂಬುವವರ ಕಾಲಿಗೆ ಗಾಯವಾಗಿದ್ದು, ಪ್ರಯಾಣಿಕರಾದ ಸೀಮಾ ಎಂಬುವವರ ಹಣೆಗೆ ಏಟು ಬಿದ್ದಿದೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳೆಗೆ ಮನೆ ಗೋಡೆ
ಕುಸಿತ, ಪಕ್ಕದ ಮನೆಗೂ ಹಾನಿ
ಸಾಗರ: ಪಟ್ಟಣದ ಗಾಂಧಿನಗರದಲ್ಲಿ ವಿಪರೀತ ಮಳೆಯಿಂದ ಶುಕ್ರವಾರ ರಾತ್ರಿ ಅಸ್ಲಾಂ ಭಾಷಾ ಎಂಬುವವರ ಮನೆಯ ಗೋಡೆ ಕುಸಿದಿದೆ. ಅಸ್ಲಾಂ ಅವರ ಮನೆಯ ಗೋಡೆ ಪಕ್ಕದಲ್ಲಿದ್ದ ಜೋಸೆಫ್ ಎಂಬುವವರ ಮನೆಯ ಮೇಲೆ ಬಿದ್ದು ಅವರ ಮನೆಗೂ ತೀವ್ರ ಹಾನಿಯಾಗಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ. ಶನಿವಾರ ಸ್ಥಳಕ್ಕೆ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಪರಿಶೀಲಿಸಿದರು. ನಗರಸಭೆ ಅಧ್ಯಕ್ಷೆ ಎನ್.ಲಲಿತಮ್ಮ, ಸದಸ್ಯರಾದ ಎನ್.ಶ್ರೀನಾಥ್, ತೀ.ನ.ಶ್ರೀನಿವಾಸ್, ಡಿ.ದಿನೇಶ್ ಭೇಟಿ ನೀಡಿದ್ದರು.