ಖೈರುಗುಂದಾ ಗ್ರಾ.ಪಂ.:ಅಧ್ಯಕ್ಷೆ ನೀಲಾವತಿ ಪದಚ್ಯುತಿ
ಹೊಸನಗರ: ಅವಿಶ್ವಾಸ ನಿರ್ಣಯದ ಮೂಲಕ ಖೈರುಗುಂದಾ ಗ್ರಾಪಂ ಅಧ್ಯಕ್ಷರನ್ನು ಪದಚ್ಯುತ ಮಾಡಿದ ಪ್ರಕರಣ ಶನಿವಾರ ನಡೆದಿದೆ. ಉಪವಿಭಾಗಾಧಿಕಾರಿ ಉದಯಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಅವಿಶ್ವಾಸ ಸಭೆಯಲ್ಲಿ ಖೈರುಗುಂದಾ ಗ್ರಾಪಂ ಅಧ್ಯಕ್ಷೆ ನೀಲಾವತಿ ಇವರನ್ನು 7-1 ಮತಗಳಿಂದ ಪದಚ್ಯುತಗೊಳಿಸಲಾಯಿತು. ಒಟ್ಟು 10 ಸದಸ್ಯರ ಗ್ರಾಪಂನಲ್ಲಿ ಅವಿಶ್ವಾಸದ ಪರ 7 ಮತ, ವಿರೋಧ 1 ಹಾಗೂ ಇಬ್ಬರು ಸದಸ್ಯರು ಗೈರು ಹಾಜರಾಗಿದ್ದರು. ಇತ್ತೀಚೆಗೆ ತಾವು ಕಾಂಗ್ರೆಸ್ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ತಮ್ಮನ್ನು ಅಧ್ಯಕ್ಷ ಸ್ಥಾನದಿಂದ ಪದಚ್ಯುತ ಮಾಡಿದರು ಎಂದು ಪದಚ್ಯುತ ಅಧ್ಯಕ್ಷೆ ನೀಲಾವತಿ ಹೇಳಿದರು. ತಮ್ಮ ಆಡಳಿತಾವಧಿಯಲ್ಲಿ ಗ್ರಾಪಂ ಅಭಿವೃದ್ಧಿಗೆ ಶ್ರಮಿಸಿದ್ದು, ಸಹಕಾರ ನೀಡಿದವರನ್ನು ಅವರು ಅಭಿನಂದಿಸಿದರು. ಅಧ್ಯಕ್ಷರ ಕಾರ್ಯವೈಖರಿ ಪಂಚಾಯ್ತಿ ಅಭಿವೃದ್ಧಿಗೆ ಪೂರಕವಾಗಿರದ ಹಿನ್ನೆಲೆಯಲ್ಲಿ ಸದಸ್ಯರು ಅಸಮಧಾನಗೊಂಡಿದ್ದರು. ಹಾಗಾಗಿ ಅವಿಶ್ವಾಸ ಮಂಡಿಸಲಾಯಿತು ಎಂದು ಗ್ರಾಪಂ ಸದಸ್ಯ ಕೆ.ಬಿ. ಕೃಷ್ಣಮೂರ್ತಿ ಹೇಳಿದ್ದಾರೆ.