ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜೈಲು ಸ್ಥಳಾಂತರ ಒಪ್ಪದ ಸರ್ಕಾರ

Rashmi Kasaragodu
Updated On : 20 Jul 2014, 12:56 pm

ವಿಶೇಷ ವರದಿ
ಶಿವಮೊಗ್ಗ: ನಗರ ಮಧ್ಯದಲ್ಲಿರುವ ಜೈಲನ್ನು ಸ್ಥಳಾಂತರ ಮಾಡಿ, ಖಾಲಿ ಉಳಿಯುವ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಬಳಸಬೇಕೆಂಬ ದೃಷ್ಟಿಯಿಂದ ಹಿಂದಿನ ಬಿಜೆಪಿ ಸರ್ಕಾರ ಸೋಗಾನೆ ಬಳಿ ರು. 10 ಕೋಟಿ ವೆಚ್ಚದಲ್ಲಿ ಹೊಸ ಜೈಲು ನಿರ್ಮಾಣಕ್ಕೆ ಮುಂದಾಯಿತು. ಆದರೆ ಕಾಂಗ್ರೆಸ್ ಸರ್ಕಾರ ಇರುವ ಹಳೇ ಜೈಲು ಹಾಗೂ ನಿರ್ಮಾಣವಾಗುತ್ತಿರುವ ಹೊಸ ಜೈಲು- ಎರಡನ್ನೂ ಬಳಸಿಕೊಳ್ಳಲು ಉದ್ದೇಶಿಸಿದೆ.
ವಿಧಾನಪರಿಷತ್ತಿನಲ್ಲಿ ಬಿಜೆಪಿ ಸದಸ್ಯ ಎಂ.ಬಿ. ಭಾನುಪ್ರಕಾಶ್ ಅವರಿಗೆ ಸದನದಲ್ಲಿ ಗೃಹ ಸಚಿವರು ಈ ಉತ್ತರ ನೀಡಿದ್ದು, ಇದು ಗೊಂದಲಕ್ಕೆ ಕಾರಣವಾಗಿದೆ.
ಏಕೆಂದರೆ ಇಡೀ ಶಿವಮೊಗ್ಗ ನಗರದಲ್ಲಿ ಸಾರ್ವಜನಿಕ ಬಳಕೆಗೆಂದು ದೊಡ್ಡ ಮೈದಾನ ಇಲ್ಲವೇ ಇಲ್ಲ. ಇದ್ದ ಏಕೈಕ ನೆಹರೂ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ಅಳವಡಿಸಿರುವುದರಿಂದ ಕಳೆದ ಕೆಲ ವರ್ಷಗಳಿಂದ ವಿಜಯದಶಮಿ ಹಬ್ಬಕ್ಕೂ ಕೊಡುತ್ತಿಲ್ಲ.
 ಕಳೆದ ವರ್ಷ ದಸರಾ ಹಬ್ಬ ಆಚರಣೆ ಹಿನ್ನಲೆಯಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಹಾಗಾಗಿ ಎಲ್ಲರ ಕಣ್ಣು ಸ್ಥಳಾಂತರವಾಗುವ ಶಿವಮೊಗ್ಗ ಜೈಲಿನ ಮೇಲೆ ಇತ್ತು.
ಹಾಲಿ ಇರುವ ಜೈಲು 275 ಕೈದಿಗಳ ಸಾಮರ್ಥ್ಯ ಹೊಂದಿದೆ. ಹಾಲಿ ಶಿಕ್ಷಿತರು, ವಿಚಾರಣಾಧೀನರು ಸೇರಿ ಈ ಜೈಲಿನಲ್ಲಿ ಒಟ್ಟು 195 ಕೈದಿಗಳು ಇದ್ದಾರೆ. ಹೊಸ ಜೈಲಿನ ಸಾಮರ್ಥ್ಯ 500ಕ್ಕೂ ಹೆಚ್ಚು. ರಾಜ್ಯದ ಕುಖ್ಯಾತ ಕೈದಿಗಳನ್ನು ಇಲ್ಲಿ ಬಂಧಿಸುವ ಚಿಂತನೆ ಗೃಹ ಇಲಾಖೆಗೆ ಇದೆ.
ಬೃಹತ್ ಸಾಮರ್ಥ್ಯದ ಹಳೇ ಜೈಲು ಹಾಗೂ ಹೊಸ ಜೈಲು- ಎರಡನ್ನೂ ಉಳಿಸಿಕೊಳ್ಳುವ ರಾಜ್ಯ ಸರ್ಕಾರದ ತೀರ್ಮಾನ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸ್ವಾತಂತ್ರ್ಯ ಪೂರ್ವದಲ್ಲಿ, ಅಂದರೆ 1872ರಲ್ಲಿ ಆರಂಭವಾದ ಶಿವಮೊಗ್ಗ ಜೈಲು ಈಗ ಚರ್ಚೆಯ ಕೇಂದ್ರವಾಗಿದೆ.
ಉತ್ತರವೇನು: ವಿಧಾನಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್ ಅವರು ಕೇಳಿರುವ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಗೃಹ ಸಚಿವ ಕೆ.ಜೆ. ಜಾರ್ಜ್ ನೀಡಿರುವ ಲಿಖಿತ ಉತ್ತರ ಹೀಗಿದೆ-
ಶಿವಮೊಗ್ಗದಲ್ಲಿ ನಿರ್ಮಿಸುತ್ತಿರುವ ನೂತನ ಕಾರಾಗೃಹವನ್ನು ಗರಿಷ್ಠ ಭದ್ರತಾ ಕೇಂದ್ರ ಕಾರಾಗೃಹವಾಗಿ ಸ್ಥಾಪಿಸಲು ಯೋಜಿಸಲಾಗಿದೆ. ಹಾಲಿ ಇರುವ ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾ ಬಂಧಿಗಳನ್ನು ಬಂಧಿಸಿಡಲು ಯೋಜಿಸಲಾಗಿದೆ. ಆದ್ದರಿಂದ ನಗರದಲ್ಲಿರುವ ಕಾರಾಗೃಹವನ್ನು ಸ್ಥಳಾಂತರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ರಾಜ್ಯದ ಕಾರಾಗೃಹಗಳಲ್ಲಿ ಕುಖ್ಯಾತ ಬಂದಿಗಳನ್ನು ಇಡಲು ಪ್ರತ್ಯೇಕವಾದ ಗರಿಷ್ಠ ಭದ್ರತಾ ವ್ಯವಸ್ಥೆ ಇಲ್ಲದಿರುವುದರಿಂದ ಈಗಿರುವ ಬಂದೀಖಾನೆಯಲ್ಲಿ ವಿಚಾರಣಾ ಬಂಧಿಗಳನ್ನು ಬಂಧಿಸಿಡುವ ಅನುಕೂಲಕ್ಕಾಗಿ ಜಿಲ್ಲಾ ಕಾರಾಗೃಹವಾಗಿ ಮುಂದುವರಿಸಲಾಗುವುದು.
ಜಾಗ ಬೇಕು: 46 ಎಕರೆ ವಿಸ್ತೀರ್ಣದ ವಿಶಾಲ ಪ್ರದೇಶದಲ್ಲಿರುವ ಈ ಜೈಲು ಈ ಜಾಗದ ನಡುವಿನಲ್ಲಿದೆ. ಕಟ್ಟಡವನ್ನು ಮಾತ್ರ ಜೈಲಾಗಿ ಉಳಿಸಿಕೊಂಡು ಉಳಿದ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ನೀಡುವುದಾದರೆ ಸಿಗುವ ಜಾಗ 20 ಎಕರೆಗಿಂತ ಕಡಿಮೆ. ದಸರಾ, ಬೃಹತ್ ರಾಜಕೀಯ ಸಮಾವೇಶ ಮಾಡುವುದಕ್ಕೆ ಯಾವುದಕ್ಕೂ ಸಾಲುವುದಿಲ್ಲ. ವಿಶಾಲ ಜಾಗ ಬೇಕೆಂದರೆ ಜೈಲು ವಿಸ್ತರಿಸದೇ ಗತ್ಯಂತರವಿಲ್ಲ.



ಈ ಜಾಗ ಸಾರ್ವಜನಿಕ ಉದ್ದೇಶಕ್ಕೆ

ಜೈಲು ಸ್ಥಳಾಂತರ ನಂತರ ಈ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಸುತ್ತೇವೆಂದು ಹಿಂದಿನ ಬಿಜೆಪಿ ಸರ್ಕಾರ ಹೇಳಿತ್ತು. ಆದರೆ ಆ ದಿಕ್ಕಿನಲ್ಲಿ ಅವರು ಮಾಡಿದ್ದು ಏನೂ ಇಲ್ಲ. ಈಗ ನಾವು ಪ್ರಯತ್ನಿಸಿದ್ದು, ಸಂಪೂರ್ಣ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಡಲು ದಿಕ್ಕಿನಲ್ಲಿ ಮುಂದೆ ಸಾಗಿದ್ದೇವೆ ಎಂದು ಶಿವಮೊಗ್ಗ ನಗರ ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದ್ದಾರೆ.
   ಕನ್ನಡಪ್ರಭ- ಅವರನ್ನು ಸಂಪರ್ಕಿಸಿದಾಗ, ನಗರೋತ್ಥಾನ ಯೋಜನೆಯಡಿ ಬಂದಿರುವ ಹಣದಲ್ಲಿ ರು. 17 ಕೋಟಿ ಗಳನ್ನು ಈ ಜಾಗದ ಅಭಿವೃದ್ಧಿಗೆ ಮೀಸಲಿಟ್ಟಿದ್ದೇವೆ. ಗೃಹ ಸಚಿವ ಜಾರ್ಜ್ ಶಿವಮೊಗ್ಗಕ್ಕೆ ಆಗಮಿಸಿದಾಗ ಅವರೊಂದಿಗೆ ಚರ್ಚಿಸಿ ಒಪ್ಪಿಗೆಯನ್ನೂ ಪಡೆದಿದ್ದೇವೆ. ಹಳೇ ಜೈಲು ಕಟ್ಟಡಗಳು ತೆರವಾಗುವುದು ಖಂಡಿತಾ ಎಂದು ಹೇಳಿದರು.
   ಕೆಲವೇ ದಿನಗಳ ಹಿಂದೆ ಈ ಕುರಿತು ಪ್ರಸ್ತಾವನೆ ಸಹ ಗೃಹ ಇಲಾಖೆಗೆ ಕೊಟ್ಟಿದ್ದೇವೆ. ಅದಕ್ಕಿಂತ ಮುಂಚೆ ಬಿಜೆಪಿಯವರು ಸದನದಲ್ಲಿ ಪ್ರಶ್ನೆ ಕೇಳಿ ಏನೂ ಆಗಿಲ್ಲ ಎಂಬ ಉತ್ತರ ಪಡೆದು ಅದನ್ನೇ ಪ್ರಚಾರ ಮಾಡುತ್ತಿದ್ದಾರೆ ಎಂದರು. ಅವರಿಗೆ ಈ ಜಾಗವನ್ನು ಸಾರ್ವಜನಿಕ ಉದ್ದೇಶಕ್ಕೇ ಬಳಕೆ ಮಾಡಬೇಕೆಂಬ ನಿರೀಕ್ಷೆ ಇದ್ದಿದ್ದರೆ ಅಂದೇ ಏಕೆ ಈ ಕುರಿತು ಒಂದು ಸರ್ಕಾರಿ ಆದೇಶ ಹೊರಡಿಸಲಿಲ್ಲ ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement