ಮತ್ತೂರು-ಹೊಸಹಳ್ಳಿ ಸೇತುವೆಗೆ ಟೆಂಡರ್
ಶಿವಮೊಗ್ಗ: ಮತ್ತೂರು-ಹೊಸಹಳ್ಳಿ ಸೇತುವೆಗೆ ಟೆಂಡರ್ ಪ್ರಕ್ರಿಯೆ ಆಗಿದ್ದು, 40 ವರ್ಷದ ಬೇಡಿಕೆಗೆ ಸ್ಪಂದಿಸಿದ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಿಗೆ ಅಭಿನಂದಿಸುವುದಾಗಿ ಬಿಜೆಪಿ ಮುಖಂಡ, ವಿಧಾನಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್ ಹೇಳಿದ್ದಾರೆ. ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು, 5.52 ಕೋಟಿ ರು. ವೆಚ್ಚದ ಈ ಯೋಜನೆಗೆ ಹಸಿರು ನಿಶಾನೆ ಸಿಕ್ಕಿದ್ದು, 2015-16ನೇ ಸಾಲಿನಲ್ಲಿ ಪೂರೈಸುವುದಾಗಿ ಹೇಳಿದ್ದಾರೆ ಎಂದರು. ಅರಣ್ಯ ಭೂಮಿ ಗುರುತಿಸುವುದಕ್ಕೆ ಈಗ ರಾಜ್ಯ ಸರ್ಕಾರ ಸಮಿತಿ ರಚಿಸಿದೆ. ಇದಕ್ಕಿಂತ ಮುಂಚೆ ಕಂದಾಯ ಹಾಗೂ ಅರಣ್ಯ ಭೂಮಿ ಯಾವುದೆಂದು ತಿಳಿಯಲು ಜಂಟಿ ಸರ್ವೆಗೆ ಸರ್ಕಾರ ಮುಂದಾಗಬೇಕು ಎಂದರು. ಸದನದಲ್ಲಿ ಪ್ರಶ್ನಿಸಿದಾಗ ಕಂದಾಯ ಸಚಿವರು ಯಾರನ್ನೂ ಒಕ್ಕಲೆಬ್ಬಿಸಲು ಬಿಡುವುದಿಲ್ಲ ಎಂದು ಸದನದಲ್ಲಿ ಭರವಸೆ ನೀಡಿದ್ದಾರೆ ಎಂದರು.ಈ ಹಿಂದೆ ನೂರಾರು ವರ್ಷಗಳ ಹಿಂದೆ ಸರ್ವೆ ನಡೆದಿದ್ದು, ಮತ್ತೆ ಈ ದಿಸೆಯಲ್ಲಿ ಪ್ರಯತ್ನಗಳೇ ಆಗಿಲ್ಲ ಎಂದರು.