ಇದೇನು ಷೋಕೇಸ್ ಆರೋಗ್ಯ ಕೇಂದ್ರವೇ?
ಆಯನೂರು ಶಿವು
ಆಯನೂರು: ಆಯನೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರೋದಕ್ಕೆ ಕಟ್ಟಡವಿದೆ ಆದರೆ ಅದು ಸೋರುತ್ತಿದೆ. ಇಸಿಜಿ ಯಂತ್ರವಿದೆ ಆದರೆ ವರದಿಯೇ ಸರಿ ಬರುತ್ತಿಲ್ಲ. ಕಿಟಕಿಗಳಿವೆ ಆದರೆ ಒಂದಕ್ಕೂ ಗ್ಲಾಸೇ ಇಲ್ಲ. ಶೌಚಾಲಯವಿದೆ ಆದರೆ ಬಳಸುವಂತಿಲ್ಲ. ಕುಡಿವ ನೀರಿನ ಟ್ಯಾಂಕ್ ಇದೆ ಆದರೆ ನೀರೇ ಇಲ್ಲ... ಇದ್ದೂ ಏನು ಸುಖ ಸ್ವಾಮಿ? ಎಂಬುದೇ ಸ್ಥಳಿಯರ ಅಸಹಾಯಕ ಪ್ರಶ್ನೆ.
ಬೆಳೆಯುತ್ತಿರುವ ಆಯನೂರಿನ ಸಮುದಾಯ ಆರೋಗ್ಯ ಕೇಂದ್ರದ ಮೇಲ್ನೋಟವಿದು. ಶಿವಮೊಗ್ಗ ಸಮೀಪದ ದೊಡ್ಡ ಗ್ರಾಮ ಆಯನೂರು. ಈ ಊರಿನ ಸುತ್ತಮುತ್ತ ಹತ್ತಾರು ಸಣ್ಣಪುಟ್ಟ ಹಳ್ಳಿಗಳಲ್ಲಿ ಸಾವಿರಾರು ಜನಸಂಖ್ಯೆ ಇದೆ. ಇಂತ ಊರಿನ ಭವಿಷ್ಯದ ದೃಷ್ಟಿಯಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರದ ಕೊಡುಗೆ ನೀಡಿದ್ದರು. ಆದರೆ ಈ ಕೇಂದ್ರ ಇದ್ದೂ ಏನು ಪ್ರಯೋಜನ? ಎಂಬ ಪ್ರಶ್ನೆಗೆ ತುತ್ತಾಗಿದೆ.
ಸ.ಆ. ಕೇಂದ್ರದ ದುಸ್ಥಿತಿಗೆ ಕಾರಣಗಳು: ಸಿಬ್ಬಂದಿ ಹಾಗೂ ಸೌಲಭ್ಯಗಳಲ್ಲಿ ಕೊರತೆ. ಇರುವ ಯಂತ್ರಗಳೊಂದೂ ನೆಟ್ಟಗೆ ಕೆಲಸ ನಿರ್ವಹಿಸುತ್ತಿಲ್ಲ. ಇಲ್ಲೊಂದು ಇಸಿಜಿ ಯಂತ್ರವಿದೆ. ಅದು ನೀಡುವುದೇ ಸುಳ್ಳು ವರದಿ. ಅಕಸ್ಮಾತ್ ಡಯಾಗ್ನಸಿಸ್ ವರದಿ ಪಡೆದು ಬೇರೆಡೆ ಹೋಗಿ ಪರಿಶೀಲಿಸಿದರೆ ರಿಸಲ್ಟ್ ಚೇಂಜ್. ಸಿಜೇರಿಯನ್ ವ್ಯವಸ್ಥೆ ಇಲ್ಲ. ಫಿಸೀಷಿಯನ್‌ಗಳ ಕೊರತೆಯಿದೆ. ಹೆರಿಗೆಗೆ ಬಂದ ಬಹುತೇಕರು ಹೆರುವುದು ಮಾತ್ರ ಶಿವಮೊಗ್ಗದ ಆಸ್ಪತ್ರೆಗಳಲ್ಲೇ. ಸಿಚ್ಯುವೇಶನ್ ಕ್ರಿಟಿಕಲ್ ಆಗಿದೆ. ದೊಡ್ಡಾಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ಇಲ್ಲಿನ ಸಿಬ್ಬಂದಿಗಳು ಹೊಣೆಯಿಂದ ಜಾರಿಕೊಳ್ಳುತ್ತಿದ್ದಾರೆ. ಇಲ್ಲಿನ ವೈದ್ಯ ಸಿಬ್ಬಂದಿ ರೋಗಿಗಳನ್ನು ಚೆನ್ನಾಗೇ ಉಪಚರಿಸುತ್ತಿದ್ದಾರೆ ಎಂದು ಗ್ರಾಮಸ್ಥರೇ ಕೊಂಡಾಡುತ್ತಾರೆ. ಆದರೆ ಆರೋಗ್ಯ ಕೇಂದ್ರಕ್ಕೆ ಬೇಕಾದ ಸಮರ್ಪಕ ಸೌಲಭ್ಯಗಳ ಕೊರತೆ ಇದೆ. ಹೆಚ್ಚಿನ ನುರಿತ ವೈದ್ಯರ ಆಗತ್ಯವಿದೆ. ಎಲ್ಲಾ ಔಷದಿಗಳು ಇಲ್ಲೇ ಸಿಗುವಂತೆ ಆಗಬೇಕಿದೆ. ಆಸ್ಪತ್ರೆಯ ಪರಿಸರ ನೋಡಿಕೊಳ್ಳಲು ಸರಿಯಾದ ಸಿಬ್ಬಂದಿಗಳಿರದಿರುವುದೇ ಇಲ್ಲಿನ ಮುಖ್ಯ ಸಮಸ್ಯೆ. ಆಯನೂರು ಸೇರಿದಂತೆ, ಹಾರ್ನಹಳ್ಳಿ, ಮಲ್ಲಾಪುರ, ಚಿನ್ಮನೆ, ಅರಸಾಳು, ಹಣಗೆರೆ ಕಟ್ಟೆ, ಕಲ್ಕೊಪ್ಪ, ಮಂಡಗಟ್ಟ, ಕುಂಸಿ, ಚೋರಡಿಯಿಂದಲೂ ಇಲ್ಲಿಗೆ ಚಿಕಿತ್ಸೆ ಪಡೆದುಕೊಳ್ಳಲು ಬರುತ್ತಾರೆ. ಆದರೆ ಸಧ್ಯದ ಪರಿಸ್ಥಿತಿಯಲ್ಲಿ ಆರ್ಥಿಕವಾಗಿ ಹಿಂದುಳಿದವರೇ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಅನಿವಾರ್ಯವಾಗಿ ಎಂದು ಮತ್ತೆ ಹೇಳಬೇಕಿಲ್ಲ.
ಹೆದ್ದಾರಿ ಪಕ್ಕದಲ್ಲೇ ಆಸ್ಪತ್ರೆ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಆಸ್ಪತ್ರೆ ಮೇಲ್ನೋಟಕ್ಕೆ ಹೆಚ್ಚಿನ ಜನ ಚಿಕಿತ್ಸೆಗೆ ಬರುವ ಅಂದಾಜಿದೆ. ಮೇಲ್ಕಂಡ ಕೊರತೆಗಳಿಂದಾಗಿಯೇ ಹೆಚ್ಚಿನವರು ಈ ಆರೋಗ್ಯ ಕೇಂದ್ರದತ್ತ ಕಣ್ಣು ಹಾಯಿಸಲೂ ಹೋಗುತ್ತಿಲ್ಲ.