ಅನ್ಯಾಯದ ವಿರುದ್ಧ ಧ್ವನಿ ಎತ್ತಿ: ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ
ಸಾಗರ: ವಿದ್ಯಾರ್ಥಿನಿಯರು ತಮಗೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಬೇಕು ಎಂದು ಪೇಟೆಠಾಣೆ ಸರ್ಕಲ್ ಇನ್ಸ್‌ಪೆಕ್ಟರ್ ಕೃಷ್ಣಮೂರ್ತಿ ಹೇಳಿದರು.
ಇಲ್ಲಿನ ಸರ್ಕಾರಿ ಬಾಲಕಿಯರ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಿಳೆಯರ ಮೇಲೆ ದೌರ್ಜನ್ಯ ಹಾಗೂ ಅತ್ಯಾಚಾರ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಿಮ್ಮ ಸುತ್ತಮುತ್ತಲೂ ನೋವು ನುಂಗಿಕೊಂಡಿರುವ ಅನೇಕ ಮಹಿಳೆಯರು ಇರುತ್ತಾರೆ. ಮುಂದಿನ ಭವಿಷ್ಯ ಹೇಗೋ ಎಂದು ತಮ್ಮ ಮೇಲೆ ಅತ್ಯಾಚಾರ, ದೌರ್ಜನ್ಯ ನಡೆದರೂ ಪೊಲೀಸರಿಗೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಾರೆ. ವಿದ್ಯಾರ್ಥಿನಿಯರು ಅಂಥವರ ನೆರವಿಗೆ ಧಾವಿಸುವಂತಾಗಬೇಕು. ಕಿಡಿಗೇಡಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ತಪ್ಪು ನಡೆಯದಂತೆ ನೋಡಿಕೊಳ್ಳುವ ಹೊಣೆಗಾರಿಕೆ ನಿಮ್ಮ ಮೇಲೆ ಇರುತ್ತದೆ. ಪೊಲೀಸ್ ಇಲಾಖೆ ಮಹಿಳೆಯರಿಗೆ ಬೆಂಗಾವಲಾಗಿ ಇರುತ್ತದೆ ಎಂದು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಟಿ. ಗಂಗಾಧರಪ್ಪ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಹಿಳಾ ಶೋಷಣೆ ತಡೆಗಟ್ಟುವ ನಿಟ್ಟಿನಲ್ಲಿ ಅನೇಕ ಕಾನೂನುಗಳನ್ನು ಜಾರಿಗೆ ತಂದಿದೆ. ಆದರೂ ದೌರ್ಜನ್ಯ ನಿಲ್ಲುತ್ತಿಲ್ಲ. ಘಟನೆ ನಡೆದಾಗ ಸಮಾಜಕ್ಕೆ ಹೆದರಿ, ದೂರು ನೀಡಲು ಮಹಿಳೆಯರು ಹಿಂದೇಟು ಹಾಕುತ್ತಿರುವುದೇ ಶೋಷಣೆ ಹೆಚ್ಚಲು ಕಾರಣ. ನಿಮ್ಮ ಪರವಾಗಿ ಇರುವ ಕಾನೂನನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಪಿ.ಎಸ್.ಐ. ಸುರೇಶ್, ಶ್ರೀಧರ್ ಆರ್. ಭಟ್, ಜಿ. ರಾಮಪ್ಪ ಹಾಜರಿದ್ದರು.