ಮಳೆ ಭೋರ್ಗರೆತ, ಖುಷಿಯಾದ ರೈತ
ಶಿರಾಳಕೊಪ್ಪ: ಪಟ್ಟಣ ಸೇರಿದಂತೆ ಸುತ್ತ ಮುತ್ತಲ ಪ್ರದೇಶದಲ್ಲಿ ಭಾರಿ ಮಳೆ ಆಗಿದ್ದು, ಅನೇಕ ಕೆರೆಕಟ್ಟೆಗಳಿಗೆ ನೀರು ಬಂದಿದ್ದು, ಕೆಲವು ಕೆರೆಗಳು ತುಂಬಿ ಕೋಡಿ ಬಿದ್ದ ಹಿನ್ನೆಲೆಯಲ್ಲಿ ರೈತರು ಸಂತಸ ಗೊಂಡಿದ್ದಾರೆ.
ಈ ಮೊದಲು ಮಳೆ ಆಗಲಿಲ್ಲ ಎಂದು ಆತಂಕದಲ್ಲಿದ್ದ ರೈತರು ತುಸು ತಡವಾಗಿ ಮಳೆ ಬಂದರೂ ನಿರಂತರ ಮಳೆ ಬರುತ್ತಿರುವುದರಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದ್ದು, ಇದೀಗ ಉತ್ಸಾಹದಿಂದ ಕೃಷಿ ಕಾರ್ಯದಲ್ಲಿ ಮಗ್ನರಾಗಿದ್ದಾರೆ.
ವಿಶೇಷವಾಗಿ ಭತ್ತದ ನಾಟಿ ಮಾಡುವ ರೈತರು ಸಸಿ ಹಾಕುವ ಕಾರ್ಯದಲ್ಲಿ ಮಗ್ನರಾದರೆ ಕೊಳವೆ ಬಾವಿ ಇದ್ದಂತಹ ರೈತರು ಈ ಮೊದಲೇ ಸಸಿಗಳನ್ನು ಹಾಕಿಕೊಂಡ ಕಾರಣ ನಾಟಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಮೆಕ್ಕೆಜೋಳಕ್ಕೆ ತೊಂದರೆ: ಈ ಹಿಂದೆ ಸಾಕಷ್ಟು ಮಳೆ ಬೀಳುತ್ತಿದ್ದ ಕಾರಣ ರೈತರು ಭತ್ತ ಬೆಳೆಯುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮಳೆ ಕಡಿಮೆ ಆಗುತ್ತಿದ್ದ ಕಾರಣ ರೈತರು ಮೆಕ್ಕೆ ಜೋಳಕ್ಕೆ ಮೊರೆ ಹೋಗಿದ್ದರು.
ಮೆಕ್ಕೆಜೋಳ ಬೆಳೆ ಬೆಳೆಯುವುದು ಸುಲಭ ಮತ್ತು ಕಡಿಮೆ ಖರ್ಚಿನಿಂದ ಬೆಳೆಯುವ ಬೆಳೆ ಎಂದು ಅರಿತ ರೈತರು ಈ ಭಾಗದಲ್ಲಿ ಹೆಚ್ಚಾಗಿ ಮೆಕ್ಕೆಜೋಳ ಬೆಳೆಯುತ್ತಿದ್ದಾರೆ. ಈ ಹಿಂದೆ ಅಲ್ಪ ಸ್ವಲ್ಪ ಮಳೆ ಆದಾಗ ಬಿತ್ತನೆ ಮಾಡಿದ್ದ ಮೆಕ್ಕೆ ಜೋಳ ಹುಲುಸಾಗಿ ಬೆಳೆದ ಮೇಲೆ ಮಳೆ ಬಾರದೇ ರೈತರು ತೀವ್ರ ಆತಂಕಗೊಂಡಿದ್ದರು. ತಡವಾಗಿ ಬಂದಾಗ ಅತಿಯಾಗಿ ಸಂತಸಗೊಂಡ ರೈತರು, ಆಗಮಿಸುತ್ತಿರುವ ಅತಿಯಾದ ಮಳೆಯಿಂದ ಜೋಳ ಎಲ್ಲಿ ಜವಳು ಆಗಿ ಹಾಳಾಗುವದೋ ಎಂಬ ಆತಂಕಕ್ಕೆ ಒಳಗಾಗಿದ್ದಾರೆ.