ಅತ್ಯಾಚಾರ ಖಂಡಿಸಿ ಬಿಜೆಪಿ ಪ್ರತಿಭಟನೆ
ಸೊರಬ: ಉತ್ತರಪ್ರದೇಶ ನಂತರ ಕರ್ನಾಟಕ ಅತ್ಯಂತ ಹೀನಾಯ ಸ್ಥಿತಿಗೆ ತಲುಪಿದ್ದು, ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಬೆಂಗಳೂರು, ಸಿಂದಗಿ, ಬೆಳಗಾವಿ ಸೇರಿದಂತೆ ವಿವಿಧೆಡೆ ಸರಣಿ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರಿಂದ ರಾಜ್ಯದಲ್ಲಿ ಮಹಿಳೆಯರು ಪ್ರತಿದಿನ ಆತಂಕದಿಂದಲೇ ಬದುಕುವಂತಾಗಿದೆ.
ಸರ್ಕಾರ ಅತ್ಯಾಚಾರಿಗಳ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಬಿಜೆಪಿ ತಾ. ಘಟಕ ಕಾರ್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಬಿಜೆಪಿ ಕಾರ್ಯಕರ್ತರು ನಂತರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಪಂ ಮಾಜಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ್, ಸದಸ್ಯರಾದ ಕೋಮಲಾ ನಿರಂಜನ್, ಗುರುಕುಮಾರ್ ಪಾಟೀಲ್, ತಾ. ಪ್ರಧಾನ ಕಾರ್ಯದರ್ಶಿ ಡಿ. ಶಿವಯೋಗಿ, ಮುಖಂಡ ಎಂ.ಕೆ. ಯೋಗೀಶ್, ಗಜಾನನರಾವ್, ಪಾಣಿ ರಾಜಪ್ಪ, ನಿರಂಜನ್ ದೊಡ್ಮನೆ, ನೆಮ್ಮದಿ ಸುಬ್ಬು, ನೆಮ್ಮದಿ ಶ್ರೀಧರ್, ಸಂಜೀವ್ ಆಚಾರಿ ಇತರರು ಇದ್ದರು.
ಬಿಜೆಪಿಗೆ ಪ್ರತಿಭಟಿಸಲುನೈತಿಕತೆ ಇಲ್ಲ: ಕಾಂಗ್ರೆಸ್
ಸೊರಬ: ರಾಜ್ಯ ಹಾಗೂ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ನಡೆಸುತ್ತಿರುವ ಪ್ರತಿಭಟನೆಗೆ ಯಾವುದೇ ನೈತಿಕತೆ ಇಲ್ಲ. ಸಮಾಜ ಹಾಗೂ ರಾಜ್ಯಕ್ಕೆ ಕಳಂಕ ತಂದ ಬಿಜೆಪಿಯವರು ಇಂದು ಅದರ ವಿರುದ್ಧ ಪ್ರತಿಭಟನೆ ಮಾಡುವುದಾದರೆ ಮೊದಲು ನಿಮ್ಮ ಪಕ್ಷದಲ್ಲಿಯೇ ಇರುವ ತಾಲೂಕಿನ ಅತ್ಯಾಚಾರಿ ಮಾಜಿ ಸಚಿವರಿಗೆ ಮೊದಲು ಶಿಕ್ಷೆ ನೀಡಿ, ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು. ಆನಂತರ ಬೇರೆಯವರ ಬಗ್ಗೆ ಮಾತನಾಡಲಿ ಎಂದು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮಹಬೂಬ್ ಕಿಡಿ ಕಾರಿದರು. ಪಟ್ಟಣ ಕಾಂಗ್ರೆಸ್ ಕಾರ್ಯಾಲಯದಲ್ಲಿ ಯುವ ಕಾಂಗ್ರೆಸ್ನಿಂದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಅತ್ಯಾಚಾರದಂತಹ ಹೀನ ಕೃತ್ಯಗಳನ್ನು ತಾವು ಸೇರಿದಂತೆ ಕಾಂಗ್ರೆಸ್ ಕೂಡಾ ಖಂಡಿಸುತ್ತದೆ. ಎಂದು ಹೇಳಿದರು.
ಬಿಜೆಪಿ 2009 ರಲ್ಲಿ ಅಧಿಕಾರದಲ್ಲಿದ್ದಾಗ ತಮ್ಮ ಪಕ್ಷದ ಮಂತ್ರಿಗಳು ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾಗಿದ್ದನ್ನು ಮರೆತಂತಿದೆ. ಅತ್ಯಾಚಾರಿ ಸಚಿವರನ್ನು ಬಿಜೆಪಿ ಎನ್ನುವ ಸುಸಂಸ್ಕೃತ ಮನೆಯಲ್ಲಿ ಇಟ್ಟುಕೊಂಡು ಅತ್ಯಾಚಾರದ ವಿರುದ್ಧ ಮಾತನಾಡಿ, ಪ್ರತಿಭಟನೆ ನಡೆಸುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ಮುಖಂಡ ಕಿರಣ್, ಜಯಂತ್, ಸಂತೋಷ್, ಶಬ್ಬೀರ್, ಸುಧಾಕರ ಇತರರಿದ್ದರು.