ಪರಿಸರ ಕಾಪಾಡದಿದ್ದರೆ ಭವಿಷ್ಯ ಮಾರಕ ಹಂದಿಗೋಡು ಚಂದ್ರಶೇಖರ್
ಸಾಗರ: ನಾವು ಪರಿಸರವನ್ನು ಕಾಪಾಡಿಕೊಳ್ಳದಿದ್ದರೆ ಭವಿಷ್ಯದಲ್ಲಿ ಮಾರಕ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಹಂದಿಗೋಡು ಚಂದ್ರಶೇಖರ್ ಹೇಳಿದರು.
ಇಲ್ಲಿನ ಶ್ರೀಮತಿ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮವನ್ನು ಸಸಿ ವಿತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ನಮ್ಮ ನಡುವೆ ವಿಜ್ಞಾನದ ಔಷಧಿಗಳಿಗೆ ಸಮರ್ಥವಾಗಿ ಸವಾಲು ಒಡ್ಡುವ ಅನೇಕ ಗಿಡಮೂಲಿಕೆ ಸಸ್ಯಗಳು ಇದೆ. ಅದರ ಬಗ್ಗೆ ನಾವು ಪರಿಪೂರ್ಣವಾಗಿ ತಿಳಿದುಕೊಳ್ಳಬೇಕು. ಪ್ರತಿಯೊಬ್ಬರೂ ಮನೆಗೊಂದರಂತೆ ಗಿಡ ನೆಟ್ಟು, ಅವುಗಳನ್ನು ಮರವಾಗುವ ತನಕ ಸಂರಕ್ಷಿಸುವ ಕೆಲಸ ಮಾಡಬೇಕು. ಮರಗಳಿಲ್ಲದೆ ಅನಾಥವಾಗುತ್ತಿರುವ ಮಲೆನಾಡನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಅಗತ್ಯ ಎಂದರು.
ಪ್ರಾಚಾರ್ಯ ಪ್ರೊ. ಶಿವೇಗೌಡ ಮಾತನಾಡಿ, ಮಾನವನು ಯಥೇಚ್ಛವಾಗಿ ಪರಿಸರದ ಲಾಭ ಪಡೆದು, ಈಗ ಸ್ವಾರ್ಥಿಯಾಗುತ್ತಿದ್ದಾನೆ. ಅಭಿವೃದ್ಧಿ ಹೆಸರಿನಲ್ಲಿ ವ್ಯಾಪಕ ಅರಣ್ಯನಾಶವಾಗಿದೆ. ಪರಿಸರದ ಋಣ ತೀರಿಸಬೇಕಾದರೆ ಸಸಿಗಳನ್ನು ದೊಡ್ಡ ಪ್ರಮಾಣದಲ್ಲಿ ನೆಟ್ಟು ಬೆಳೆಸುವ ಕೆಲಸವಾಗಬೇಕು. ವಿದ್ಯಾರ್ಥಿನಿಯರು ಕೇವಲ ಕಾಲೇಜು ಆವರಣದಲ್ಲಿ ಮಾತ್ರ ಪರಿಸರ ಕಾಳಜಿ ತೋರದೆ ತಮ್ಮ ಮನೆಯಂಗಳ ಮತ್ತು ಗ್ರಾಮಗಳಲ್ಲೂ ಪರಿಸರ ಸಂರಕ್ಷಿಸುವ ಸಂಕಲ್ಪ ಕೈಗೊಳ್ಳಬೇಕು ಎಂದು ಸಲಹೆ ಮಾಡಿದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಓ. ಜಿ. ಬಸವನಗೌಡ, ಡಾ. ಮೀನಾಕುಮಾರಿ, ಪ್ರೊ. ಎ.ಗಣೇಶಭಟ್, ಪ್ರೊ. ರಾಜಾರಾಮ್ಕೆ ಎಲ್, ಪ್ರೊ. ಉಮಾಪತಿ, ಡಾ.. ರಘುನಾಥ್, ಪ್ರೊ. ರವಿಶಂಕರ್ ಪ್ರೊ. ನಾಗರಾಜ್, ಪ್ರೊ. ಮಹಾಬಲೇಶ್ ಕೆ. ಎನ್, ಪ್ರೊ. ಗಿರಿಜ ಮೂಲಿಮನಿ, ಡಾ. ಕುಲಕರ್ಣಿ ಎಚ್.ಕೆ. ಹಾಜರಿದ್ದರು.