ಮೊದಲ ಉಪ 'ಶಿಕಾರಿ'ಗೆ ಕ್ಷೇತ್ರ ಸಜ್ಜು
ಹೊನ್ನಾಳಿ ಚಂದ್ರಶೇಖರ್
ಶಿವಮೊಗ್ಗ: ಶಿಕಾರಿಪುರ ಚುನಾವಣಾ ಕಣದಲ್ಲೀಗ ಮತ್ತೆ ಚಟುವಟಿಕೆಗಳು ಹೆಚ್ಚಾಗಿವೆ.
ಕ್ಷೇತ್ರದಿಂದ ಆಯ್ಕೆಯಾಗಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸಂಸದರಾಗಿದ್ದರಿಂದ ತೆರವಾಗಿರುವ ಇಲ್ಲಿ ಚುನಾವಣೆ ನಿರೀಕ್ಷಿತವೇ ಆಗಿತ್ತು. 1999ರಲ್ಲಿ ಹೊರತುಪಡಿಸಿ ಬಿಜೆಪಿ ಭದ್ರಕೋಟೆಯೇ ಆಗಿರುವ ಈ ಕ್ಷೇತ್ರದಲ್ಲಿ ಈ ಬಾರಿ ಯಡಿಯೂರಪ್ಪ ಅವರ ಪುತ್ರ, ಮಾಜಿ ಸಂಸದ ಬಿ. ವೈ. ರಾಘವೇಂದ್ರ ಕಣಕ್ಕಿಳಿಯುವುದು ಬಹುತೇಕ ಖಚಿತ.
ಕಾಂಗ್ರೆಸ್ ಪಕ್ಷವು ಯಾರನ್ನು ಕಣಕ್ಕಿಳಿಸಬೇಕೆಂದು ಇನ್ನೂ ನಿರ್ಧರಿಸಿಲ್ಲ. ಹಿಂದೆ ಎರಡು ಬಾರಿ ಕಣಕ್ಕಿಳಿಸಿದ್ದ ನಗರದ ಮಹದೇವಪ್ಪ, ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಶಾಂತವೀರಪ್ಪ ಗೌಡ, ಹಿರೇಕೆರೂರು ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ಬಿ. ಸಿ. ಪಾಟೀಲ್ ಅವರ ಹೆಸರುಗಳು ಚರ್ಚೆಯಲ್ಲಿವೆ. ಕಾಂಗ್ರೆಸ್ ಪಕ್ಷ ಈ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದರಿಂದ ಅಚ್ಚರಿಯ ಅಭ್ಯರ್ಥಿಯ ಹೆಸರೂ ಘೋಷಣೆಯಾಗಬಹುದು.
ಇನ್ನು ಜೆಡಿಎಸ್ ಈ ಹಿಂದಿನ ಚುನಾವಣೆಯಲ್ಲಿ ಗಮನಾರ್ಹ ಮತ ಪಡೆದಿದ್ದ ಬಳಿಗಾರ್ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವಾಗಿದೆ.
ಮೊದಲ ಉಪಚುನಾವಣೆ: ಈ ಬಾರಿ ನಡೆಯುತ್ತಿರುವುದು ಕ್ಷೇತ್ರದ ಮೊದಲ ಉಪಚುನಾವಣೆ. ಶಿಕಾರಿಪುರ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಇದೂವರೆಗೆ ಉಪಚುನಾವಣೆ ನಡೆದೇ ಇಲ್ಲ.
ಕ್ಷೇತ್ರದಲ್ಲಿ ಆರು ಬಾರಿ ಬಿಜೆಪಿ, ನಾಲ್ಕು ಬಾರಿ ಕಾಂಗ್ರೆಸ್, ತಲಾ ಒಂದು ಬಾರಿ ಪ್ರಜಾ ಸೋಷಿಯಲಿಸ್ಟ್ ಪಕ್ಷ ಹಾಗೂ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ. ಯಡಿಯೂರಪ್ಪ ಅವರು ಏಳು ಬಾರಿ ಗೆದ್ದಿದ್ದರೆ, ಕೆ. ಯಂಕಟಪ್ಪ ಅವರು ಎರಡು ಬಾರಿ ಆಯ್ಕೆಯಾಗಿದ್ದಾರೆ. ಎಚ್. ಸಿದ್ದಯ್ಯ, ಗಂಗಾನಾಯ್ಕ್, ವೀರಪ್ಪ, ಜಿ. ಬಸವಣ್ಯಪ್ಪ, ಮಹಾಲಿಂಗಪ್ಪ ಒಮ್ಮೆ ಶಾಸಕರಾಗಿದ್ದಾರೆ.
ಕ್ಷೇತ್ರದ ಚುನಾವಣಾ ಇತಿಹಾಸ
1952- ಸೊರಬ ಜತೆಗೂಡಿ ಶಿಕಾರಿಪುರವು ದ್ವಿಸದಸ್ಯ ಕ್ಷೇತ್ರವಾಗಿತ್ತು. ಕಾಂಗ್ರೆಸ್ ಪಕ್ಷದ ಎಚ್. ಸಿದ್ದಯ್ಯ, ಗಂಗಾನಾಯಕ್ ಆಯ್ಕೆಯಾಗಿದ್ದರು.
1957- ಶಿಕಾರಿಪುರ ಕ್ಷೇತ್ರ ಅಸ್ತಿತ್ವದಲ್ಲೇ ಇರಲಿಲ್ಲ.
1967- ಮೀಸಲು ಕ್ಷೇತ್ರ, ಮತ್ತೆ ವೀರಪ್ಪ ಹಾಗೂ ಜಿ. ಬಸವಣ್ಯಪ್ಪ ಅವರ ನಡುವೆ ತುರುಸಿನ ಸ್ಪರ್ಧೆ. ಈ ಬಾರಿ ಸಂಯುಕ್ತ ಸೋಷಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿದ್ದ ಜಿ. ಬಸವಣ್ಯಪ್ಪ ಅವರು 12,014 ಮತಗಳಿಂದ ಗೆದ್ದಿದ್ದರು.
1978- ಮೀಸಲು ಕ್ಷೇತ್ರ ಹಣೆಪಟ್ಟಿಯಿಂದ ಹೊರಬಂದಿದ್ದ ಈ ಕ್ಷೇತ್ರದಲ್ಲಿ ಇಂದಿರಾ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಕೆ. ಯಂಕಟಪ್ಪ ಅವರು ಜನತಾ ಪಾರ್ಟಿಯ ಎಚ್. ಬಸವಣ್ಯಪ್ಪ ಅವರನ್ನು 11,186 ಮತಗಳ ಅಂತರದಿಂದ ಸೋಲುಣಿಸಿದರು.
1983- ಯಡಿಯೂರಪ್ಪ ಅವರ ಪ್ರಾಬಲ್ಯ ಆರಂಭದ ಮೈಲಿಗಲ್ಲು ಈ ಚುನಾವಣೆ. ಬಿಜೆಪಿಯಿಂದ ಕಣಕ್ಕಿಳಿದಿದ್ದ ಇವರು ಅಂದು ಬಂದೀಖಾನೆ ಸಚಿವರಾಗಿದ್ದ ಕೆ. ಯಂಕಟಪ್ಪ ಅವರನ್ನು 22,183 ಮತಗಳಿಂದ ಸೋಲಿಸಿದರು.
1985- ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರು ರಾಜೀನಾಮೆ ನೀಡಿದ್ದರಿಂದ ಇಡೀ ರಾಜ್ಯದಲ್ಲಿ ಕೇವಲ ಒಂದೂವರೆ ವರ್ಷದಲ್ಲಿ ಮತ್ತೆ ಚುನಾವಣೆ ಎದುರಾಗಿತ್ತು. ಮತ್ತೆ ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿಸಿದ್ದ ಮಹದೇವನಗೌಡರು ಎಂ. ಪಾಟೀಲ ಅವರನ್ನು 11,555 ಮತಗಳಿಂದ ಸೋಲಿಸಿದ್ದರು.
1989- ಈ ಬಾರಿ ಯಡಿಯೂರಪ್ಪ ಅವರು ಕಾಂಗ್ರೆಸ್ ಪಕ್ಷದ ನಗರದ ಮಹದೇವಪ್ಪ ಅವರನ್ನು ಸೋಲಿಸಿದ್ದರು. ಭಾರಿ ತುರುಸಿನ ಸ್ಪರ್ಧೆಯಲ್ಲಿ ಗೆಲವಿನ ಅಂತರ ಕೇವಲ 2,274.
1994- ಮತ್ತೆ ಯಡಿಯೂರಪ್ಪರಿಗೆ ನಾಲ್ಕನೇ ಗೆಲವು. ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷದ ನಗರದ ಮಹದೇವಪ್ಪ. ಅಂತರ 28,885.
1999- ಬಂಗಾರಪ್ಪ ಅವರ ಅಲೆ ಎದುರು ಯಡಿಯೂರಪ್ಪ ಅವರಿಗೆ ಗೆಲವು ಸಾಧ್ಯವಾಗಲಿಲ್ಲ. ಕಾಂಗ್ರೆಸ್ ಪಕ್ಷದ ಮಹಾಲಿಂಗಪ್ಪ ಅವರ ವಿರುದ್ಧ 7,561 ಮತಗಳಿಂದ ಸೋತರು.
2004- ಯಡಿಯೂರಪ್ಪ ಮತ್ತೆ ಗೆಲವಿನ ನಗೆ ಬೀರಿದರು. ಕಾಂಗ್ರೆಸ್ ಪಕ್ಷದ ಕೆ. ಶೇಖರಪ್ಪ ಅವರ ವಿರುದ್ಧ 19,953 ಮತಗಳಿಂದ ಗೆದ್ದರು.
2013- ಬಿಜೆಪಿ ಅಧಿಕಾರಾವಧಿಯ ನಂತರ ನಡೆದ ಚುನಾವಣೆಯಲ್ಲಿ ತಾವೇ ಸ್ಥಾಪಿಸಿದ್ದ ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿ ಯಡಿಯೂರಪ್ಪ ಜಯಶಾಲಿಯಾದರು. ಬಹುದಿನಗಳ ಗೆಳೆಯ, ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪ ಗೌಡ ಅವರ ವಿರುದ್ಧ ಗೆಲವಿನ ಅಂತರ 24,425.
2014- ಸಂಸದರಾಗಿ ಗೆದ್ದ ಬಿಎಸ್ವೈ ರಾಜಿನಾಮೆಯಿಂದ ತೆರವಾದ ಕ್ಷೇತ್ರದಲ್ಲಿ ಮೊದಲ ಉಪಚುನಾವಣೆ.