ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಿವೇಶನ ಹಂಚಿಕೆಗೆ ಅಗತ್ಯ ಕ್ರಮ: ಜಯರಾಮ ನಾಯ್ಕ

Rashmi Kasaragodu
Updated On : 24 Jul 2014, 11:14 am

ಆಯನೂರು: ನಿವೇಶನ ರಹಿತರಿಗೆ ಆಯನೂರಿನ ಸರ್ವೆ ನಂಬರ್ 131ರಲ್ಲಿ ನಿವೇಶನ ಹಂಚಿಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಜಯರಾಮ ನಾಯ್ಕ ಭರವಸೆ ನೀಡಿದರು.
ಬುಧವಾರ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜೀವ್‌ಗಾಂಧೀ ಗ್ರಾಮೀಣ ವಸತಿ ನಿಗಮದಿಂದ ನಿವೇಶನ ಹಂಚಿಕೆ ಸಂಬಂಧ ಪತ್ರ ಬಂದಿದ್ದು, ಅದರಂತೆ ನಿವೇಶನ ರಹಿತರ ಹೊಸಪಟ್ಟಿ ರಚನೆ ಮಾಡಿ ಯೋಜನೆ ರೂಪಿಸಿ ಅನುಮೋದನೆ ಪಡೆದುಕೊಳ್ಳಲಾಗುತ್ತದೆ ಎಂದರು.ಸದ್ಯದ ಮಾಹಿತಿ ಪ್ರಕಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 125 ಮಂದಿ ನಿವೇಶನ ರಹಿತರಿದ್ದು, ಇವರಿಗೆ ನಿವೇಶನ ಕಲ್ಪಿಸುವ ಸಂಬಂಧ ನಿಯಮಗಳ ಪ್ರಕಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದರು.ಎಚ್ಚರಿಕೆ: ಆರೋಗ್ಯ ಇಲಾಖೆಯ ಸಂಪತ್ ಮಾತನಾಡಿ, ಮಳೆಗಾಲದ ಸಂದರ್ಭದಲ್ಲಿ ಬರುವ ಸಾಂಕ್ರಾಮಿಕ ರೋಗಗಳ ಬಗ್ಗೆ ಗ್ರಾಮಸ್ಥರು ಎಚ್ಚರಿಕೆ ಯಿಂದಿರುವಂತೆ ಸಲಹೆ ನೀಡಿದರು. ಮನೆ- ಹೊಟೇಲ್‌ಗಳಲ್ಲಿ ಕಾಯಿಸಿದ ನೀರು ಬಳಸುವಂತೆ ಸಲಹೆ ನೀಡಿದ ಅವರು, ಮಳೆಯ ನೀರು ಸರಾಗವಾಗಿ ಹೋಗಲು ಊರುಗಳಲ್ಲಿ ಚರಂಡಿ ವ್ಯವಸ್ಥೆಗಳನ್ನು ಮಾಡುವಂತೆ ತಿಳಿಸಿದರು.
ಮಾದರಿ ಶಾಲೆ ಮುಖ್ಯ ಶಿಕ್ಷಕಿ ತ್ರಿಪುರಾಂಬ ಮಾತನಾಡಿ, ಆಯನೂರಿನಲ್ಲಿ ಬಾಲಕರ ಹಾಸ್ಟೆಲ್ ಇಲ್ಲದೆ ಸಮಸ್ಯೆಯಾಗಿದೆ. ಈ ಊರಿನ ಮಕ್ಕಳು ಸಿರಿಗೆರೆ ಗ್ರಾಮಕ್ಕೆ ಹೋಗುವಂತಾಗಿದೆ. ಆದ್ದರಿಂದ ಮುಚ್ಚಿರುವ ಬಾಲಕರ ಹಾಸ್ಟೆಲ್ ಪುನಾರಂಭಕ್ಕೆ ಕ್ರಮಕೈಗೊಳ್ಳುವ ಅಗತ್ಯವಿದೆ ಎಂದರು.
ಸಭೆಯ ನೊಡಲ್ ಅಧಿಕಾರಿಯಾಗಿ ಪಶು ವೈದ್ಯಾಧಿಕಾರಿ ರಾಮಚಂದ್ರ ಆಗಮಿಸಿದ್ದರು. ಗ್ರಾಪಂ ಅಧ್ಯಕ್ಷೆ ಭಾಗ್ಯ ನರಸಿಂಹಪ್ಪ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement