ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಿಇಎಸ್ ಎಂಜಿನಿಯರಿಂಗ್ ಕಾಲೇಜಿಗೆ ಐಎಸ್‌ಒ ಗರಿ

Rashmi Kasaragodu
Updated On : 24 Jul 2014, 11:14 am

ಶಿವಮೊಗ್ಗ: ಮಲೆನಾಡು ಭಾಗದಲ್ಲಿ ಐಎಸ್‌ಒ 9001-2008 ಗುಣಮಟ್ಟದ ಪ್ರಪ್ರಥಮ ಎಂಜಿನಿಯರಿಂಗ್ ಕಾಲೇಜೆಂಬ ಹೆಗ್ಗಳಿಕೆಗೆ ಶಿವಮೊಗ್ಗದ ಪಿಇಎಸ್ ಗ್ರೂಪ್‌ನಪಿಇಎಸ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ಪಾತ್ರವಾಗಿದೆ.
ಬುಧವಾರ ಸುದ್ಧಿಗೋಷ್ಠಿಯಲ್ಲಿ ಪಿಇಎಸ್ ಐಟಿಎಂಗೆ ಐಎಸ್‌ಒ 9001-2008 ಯೋಗ್ಯತಾ ಪ್ರಮಾಣಪತ್ರ ದೊರೆತಿರುವ ವಿಷಯ ತಿಳಿಸಿದ ಪಿಇಎಸ್‌ನ ಜಂಟಿ ಕಾರ್ಯದರ್ಶಿ ಅರುಣಾದೇವಿ, ಗುಣಮಟ್ಟದ ಆಡಳಿತ ವ್ಯವಸ್ಥೆಗೆ ಮಾನದಂಡವಾಗಿರುವ ಮತ್ತು ಒಂದು ಸಂಸ್ಥೆ ನಿರ್ದಿಷ್ಟಮಾನಕ್ಕೆ ಯೋಗ್ಯತಾ ಪ್ರಮಾಣಪತ್ರ ನೀಡುವ ಏಕಮಾತ್ರ ಅಳತೆಗೋಲಾಗಲಿದೆ. ಈ ಪ್ರಮಾಣಪತ್ರ ನಮ್ಮ ಸಂಸ್ಥೆಗೆ ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ಪ್ರಕ್ರಿಯೆ: 2013ರ ಆಗಸ್ಟ್ 28ರಂದು ಐಎಸ್‌ಓ ಯೋಗ್ಯತಾ ಪ್ರಮಾಣ ಪತ್ರ ಕ್ರಿಯಾ ಯೋಜನೆಗೆ ಬೀಜಾಂಕುರವಾಯಿತು. ನಂತರ ಸ್ಟೆಲ್ಲರ್ ಮ್ಯಾನೇಜ್‌ಮೆಂಟ್ ಕನ್ಸ್‌ಲ್ಟೆಂಟ್ಸ್ ಅವರನ್ನು ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲಾಯಿತು. ಡಾ. ಆರ್.ನಾಗರಾಜ್ ಅವರನ್ನು ಆಡಳಿತ ಮಂಡಳಿ ಪ್ರತಿನಿಧಿಯಾಗಿ ಹಾಗೂ ಎಸ್. ವಿನಯ್ ಮತ್ತು ಅರವಿಂದ್ ಮಲ್ಲಿಕ್ ಅವರನ್ನು ಉಪ ಪ್ರತಿನಿಧಿಗಳನ್ನಾಗಿ ಈ ಕಾರ್ಯಕ್ಕೆ ನೇಮಿಸಲಾಯಿತು.
ನಿಯೋಜಿತ ಸಲಹೆಗಾರರು ಆಡಳಿತ ಮಂಡಳಿ ಪ್ರತಿಧಿಗಳು, ವಿವಿಧ ವಿಭಾಗಗಳ ಮುಖ್ಯಸ್ಥರು, ಹಿರಿಯ ಶ್ರೇಣಿ ಅಧ್ಯಾಪಕರು ಹಾಗೂ ಹಿರಿಯ ಸಿಬ್ಬಂದಿ ವರ್ಗದವರಿಗೆ ತರಬೇತಿ ಕಾರ್ಯಾಗಾರ ನಡೆಸಿದರು. ನಂತರ ಗುಣಮಟ್ಟದ ಆಡಳಿತ ನಿರ್ವಹಣೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಸಿದ್ಧಪಡಿಸುವ ಬಗ್ಗೆ ಎಲ್ಲಾ ವಿಭಾಗದ ಮುಖ್ಯಸ್ಥರು ಮತ್ತು ಸಲಹೆಗಾರರ ಸಭೆ ನಡೆಸಲಾಯಿತು. ಆಂತರಿಕ ಲೆಕ್ಕ ಪರಿಶೋಧಕರ ತರಬೇತಿಯನ್ನು (ಐಎಸ್‌ಓಗೆ ಸಂಬಂಧಿಸಿದ) ನಡೆಸಲಾಯಿತು. ನಂತರ ಗುಣಮಟ್ಟದ ಆಡಳಿತ ವ್ಯವಸ್ಥೆಗೆ ಸಂಬಂಧಿಸಿದ ಆಂತರಿಕ ಲೆಕ್ಕ ಪರಿಶೋಧನೆ ನಡೆಸಲಾಯಿತು.
24 ಆಂತರಿಕ ಲೆಕ್ಕ ಪರಿಶೋಧಕರಿಂದ ಮತ್ತು ಅರ್ಹತೆಯುಳ್ಳ ಸದಸ್ಯರಿಂದ ಲೆಕ್ಕ ಪರಿಶೋಧನೆ ನಡೆಸಲಾಯಿತು. ಈ ವೇಳೆ ಕಂಡುಬಂದ ಸಣ್ಣಪುಟ್ಟ ತಪ್ಪುಗಳನ್ನು ಆಡಳಿತ ಮಂಡಳಿ ಪ್ರತಿನಿಧಿಗಳು ಸರಿಪಡಿಸಿದರು. 2014ರ ಮಾರ್ಚ್ 17, 18 ಮತ್ತು 19ರಂದು ಐಎಸ್ ಓಗೆ ಸಂಬಂಧಿಸಿದ ಗುಣಮಟ್ಟ ಆಡಳಿತ ವ್ಯವಸ್ಥೆಗೆ ಒಳಪಟ್ಟ ದಾಖಲೆಗಳ 2ನೇ ಹಂತದ ಲೆಕ್ಕ ಪರಿಶೋಧನೆ ಸ್ಟೆಲ್ಲರ್ ಮ್ಯಾನೇಜ್‌ಮೆಂಟ್ ಕನ್ಸ್‌ಲ್ಟೆಂಟ್ಸ್‌ನ ಹಿರಿಯ ಸದಸ್ಯ ಮತ್ತು ಲೆಕ್ಕ ಪರಿಶೋಧಕ ಡೇನಿಯಲ್ ಜಾನ್ಸನ್ ನೇತೃತ್ವದಲ್ಲಿ ನಡೆಯಿತು.
ಪರಿಶೀಲನೆ: ಆಡಳಿತ ವ್ಯವಸ್ಥೆಯೊಂದಿಗೆ ಕಾಲೇಜಿನ ಕುಡಿವ ನೀರಿನ ಗುಣಮಟ್ಟ, ಶೌಚಾಲಯ ವ್ಯವಸ್ಥೆ, ಹಾಸ್ಟೆಲ್, ಆರೋಗ್ಯ ವ್ಯವಸ್ಥೆ, ಬೆಂಕಿ ನಿಯಂತ್ರಕ, ಲ್ಯಾಬೋರೇಟರಿ ಸೇರಿದಂತೆ ಕಾಲೇಜಿನಲ್ಲಿ ಕೈಗೊಂಡ ವ್ಯವಸ್ಥೆಯನ್ನು ಕೂಲಂಕಶವಾಗಿ ಪರಿಶೀಲಿಸಿದ ತಂಡ ಕೆಲವು ಸಣ್ಣಪುಟ್ಟ ಬದಲಾವಣೆಗೆ ಅವಕಾಶ ನೀಡಿತು. 3 ದಿನದ ತರುವಾಯ ಮತ್ತೆ ಪರಿಶೋಧನೆ ಮಾಡಿ ಶೂನ್ಯ ಅಖಿಚಿತತೆ ಇರುವುದನ್ನು ದೃಢಪಡಿಸಿ ಪ್ರಮಾಣಪತ್ರ ನೀಡಿತು.
ಏನು ಲಾಭ: ಈ ಪ್ರಮಾಣಪತ್ರದಿಂದ ಏನು ಲಾಭ ಎಂಬ ಪ್ರಶ್ನೆ ಏಳುವುದು ಸಾಮಾನ್ಯ. ಈ ಪ್ರಮಾಣಪತ್ರ ಸಂಸ್ಥೆಯ ಆಡಳಿತ ವ್ಯವಸ್ಥೆ, ಸೌಲಭ್ಯಗಳ ಬಗ್ಗೆ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯಿಂದ ಪರಿಶೀಲನೆಗೊಳಪಟ್ಟು ಯೋಗ್ಯತೆಯನ್ನು ಸೂಚಿಸುತ್ತಿದೆ. ಭವಿಷ್ಯದಲ್ಲಿ ಈ ಮಾನ್ಯತೆ ಇರಬೇಕೆಂದರೆ ಅಷ್ಟೇ ಗುಣಮಟ್ಟದ ಸೌಲಭ್ಯ ಮುಂದುವರಿಸಬೇಕಾಗುತ್ತದೆ. ಹೀಗಾದಾಗ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ, ಅಚ್ಚುಕಟ್ಟಾದ ಗುಣಮಟ್ಟದ ವ್ಯವಸ್ಥೆ ವಿದ್ಯಾರ್ಥಿಗಳಿಗೆ ನಿರಂತರವಾಗಿ ದೊರೆಯುತ್ತದೆ. ಕಾಲೇಜಿನ ಪ್ರಾಂಶುಪಾಲ ಅಶೋಕ್‌ಕುಮಾರ್, ಡಾ.ನಾಗರಾಜ್ ಇದ್ದರು.


ಪೆಸೆಟ್‌ಗೆ ಶೇ.96 ಫಲಿತಾಂಶ
ಶಿವಮೊಗ್ಗ: ಪೆಸೆಟ್ ಎಂಜಿನಿಯರಿಂಗ್ ಕಾಲೇಜು 2014ರ ಜುಲೈನಲ್ಲಿ ಪ್ರಕಟಗೊಂಡ ಅಂತಿಮ ವರ್ಷದ ಎಂಜಿನಿಯರಿಂಗ್ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ತೋರಿದೆ. ಇಸಿ- ಶೇ.100, ಐಇಇಇ- ಶೇ.96, ಮೆಕಾ - ಶೇ. 96.5, ಸಿಎಸ್ -ಶೇ.93, ಐಎಸ್- ಶೇ.95.5 ಫಲಿತಾಂಶ ಬಂದಿದೆ. ಶೇ.74.5 ವಿದ್ಯಾರ್ಥಿಗಳು ಅತ್ಯುನ್ನತ ದರ್ಜೆಯಲ್ಲಿ, ಶೇ.21.5ರಷ್ಟು ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ಅರುಣಾದೇವಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement