ಅಪಾಯದ ಮಟ್ಟ ಮೀರಿದ ವರದಾ, ದಂಡಾವತಿ
ಸೊರಬ: ತಾಲೂಕಿನ ಬಹುತೇಕ ಎಲ್ಲೆಡೆ ಸತತ 4 ದಿನದಿಂದ ಮಳೆ ಸುರಿಯುತ್ತಿದ್ದು, ವರದಾ ಮತ್ತು ದಂಡಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜುಲೈ ತಿಂಗಳ ವಾಡಿಕೆ ಮಳೆ 646 ಮಿ.ಮೀ. 2014ರ ಜುಲೈ 23ರವರೆಗೆ 419.8 ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಜುಲೈನಲ್ಲಿ 863 ಮಿ.ಮೀ. ಮಳೆ ದಾಖಲಾಗಿತ್ತು. ಬುಧವಾರ ಪಟ್ಟಣದಲ್ಲಿ 23 ಮಿ.ಮೀ. ಮಳೆಯಾಗಿದೆ. ಚಂದ್ರಗುತ್ತಿಯಲ್ಲಿ 47 ಮಿ.ಮೀ.ಮಳೆಯಾಗಿದೆ.
ಆನವಟ್ಟಿ ಸಮೀಪದ ಶಿಡ್ಡಿಹಳ್ಳಿ ಗ್ರಾಮಕ್ಕೆ ದಂಡಾವತಿ ನದಿ ಸುತ್ತುವರೆದಿದ್ದು, ರಸ್ತೆ ಸಂಪರ್ಕ ಕಡಿದಿದೆ.
ಗ್ರಾಮಸ್ಥರ ಸ್ಥಳಾಂತರ ಅನಿವಾರ್ಯ: ವರದಾ ಮತ್ತು ದಂಡಾವತಿ ನದಿ ತೀರದ ಸುಮಾರು 1200 ಹೆಕ್ಟೇರ್‌ಗೂ ಅಧಿಕ ಜಮೀನು ಜಲಾವೃತಗೊಂಡಿದ್ದು, ಜಲಾವೃತಗೊಂಡ ಜಮೀನಿನಲ್ಲಿ ಸುಮಾರು 800 ಎಕರೆ ಒಣ ಬಿತ್ತನೆಯಾದ ಬತ್ತವಿದೆ. ವರದಾ ನದಿ ತೀರದ ಚಂದ್ರಗುತ್ತಿ ಹೋಬಳಿ ನ್ಯಾರ್ಸಿ, ಪುರದ ಬಳಿ ನೆರೆಯ ಪ್ರಮಾಣ ಗಂಟೆಗಂಟೆಗೂ ಏರಿಕೆ ಕಾಣುತ್ತಿದ್ದು, ಗ್ರಾಮಸ್ಥರನ್ನು ಸ್ಥಳಾಂತರಿಸುವ ಅನಿವಾರ್ಯತೆ ಎದುರಾಗಲಿದೆ. ಕಳೆದ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ದಂಡಾವತಿ, ವರದಾ ಹಾಗೂ ಕೆಲ ಹಳ್ಳ, ಕೆರೆಗಳ ಅರ್ಭಟದಿಂದಾಗಿ ಬತ್ತದ ಅಗೆ ಕೊಚ್ಚಿಕೊಂಡು ಹೋಗಿದ್ದು, ನಾಟಿ ಕಾರ್ಯಕ್ಕೆ ಅಡ್ಡಿಯಾಗಿದೆ. ಜುಲೈ 22ರ ಅಂತ್ಯದ ವೇಳೆಗೆ 7200 ಹೆಕ್ಟೇರ್ ಪ್ರದೇಶದಲ್ಲಿ ಬತ್ತದ ಕೂರಿಗೆ ಬಿತ್ತನೆ, 10100 ಹೆಕ್ಟೇರ್‌ನಲ್ಲಿ ನಾಟಿ ಮಾಡಲು ಬತ್ತದ ಅಗೆ ಮಡಿಯನ್ನು ತಯಾರಿಸುವ ಕಾರ್ಯ ಮುಗಿದಿತ್ತು.
ಉದುರುತ್ತಿರುವ ಅಡಕೆ: 12900 ಹೆಕ್ಟೇರ್ ಮುಸುಕಿನ ಜೋಳ ಬಿತ್ತನೆಯಾಗಿದ್ದು, ಒಟ್ಟು 30315 ಹೆಕ್ಟೇರ್‌ನಲ್ಲಿ ಜೋಳ ಬೆಳೆಯಲಾಗುತ್ತಿದೆ. ಆದರೆ, ಕಳೆದ 4 ದಿನಗಳಿಂದ ಸುರಿದ ಮಳೆಯಿಂದಾಗಿ 1125 ಎಕರೆ ಭತ್ತದ ಬೆಳೆ ಹಾಗೂ 375 ಎಕರೆ ಮುಸುಕಿನಜೋಳ ಮಳೆ ಹಾಗೂ ದಂಡಾವತಿ-ವರದಾ ನದಿ ಪ್ರವಾಹದಿಂದ ಹಾಳಾಗಿದೆ. ಮೆಕ್ಕೆಜೋಳ, ಶುಂಠಿ ಮಣ್ಣಿನಲ್ಲೇ ಕೊಳೆಯಲಾರಂಭಿಸಿದರೆ, ಜವಳು ಕೊಳೆಯಿಂದಾಗಿ ಮರದಿಂದ ಅಡಕೆ ಉದುರಲಾರಂಭಿಸಿದೆ.