ಡಿಸಿಸಿ ಬ್ಯಾಂಕ್ ಅವ್ಯವಹಾರಕ್ಕೆ ಮಂಜುನಾಥಗೌಡರೇ'ಗುರು'
ತೀರ್ಥಹಳ್ಳಿ: ಆರ್.ಎಂ. ಮಂಜುನಾಥ ಗೌಡರು ಸಹಕಾರಿ ವ್ಯವಸ್ಥೆಯನ್ನು ಗಬ್ಬೆಬ್ಬಿಸಿದ್ದಾರೆ. ಡಿಸಿಸಿ ಬ್ಯಾಂಕಿನಲ್ಲಿ ಹಲವಾರು ವರ್ಷಗಳಿಂದ ಅವ್ಯವಹಾರ ನಡೆಯುತ್ತಿದ್ದು, ಇದಕ್ಕೆ ಮಂಜುನಾಥಗೌಡರೇ ಗುರು. ಈಗ ನಡೆಯುತ್ತಿರುವ ವಿದ್ಯಮಾನಗಳಿಂದ ಅವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಆರಗ ಜ್ಞಾನೇಂದ್ರ ಆರೋಪಿಸಿದರು.
ಮಂಜುನಾಥಗೌಡರು ಎಂಪಿಎಂಗೆ ಸಂಬಂಧಿಸಿದಂತೆ ಜ್ಞಾನೇಂದ್ರ ವಿರುದ್ಧ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಗುರುವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಜ್ಞಾನೇಂದ್ರ ಏಕಕಾಲದಲ್ಲಿ ಜಿಲ್ಲೆಯ ಎಲ್ಲ ಡಿಸಿಸಿ ಬ್ಯಾಂಕು ಶಾಖೆಗಳ ತನಿಖೆ ಆಗಬೇಕು ಎಂದು ಒತ್ತಾಯಿಸಿದರು. ಶಿವಮೊಗ್ಗ ನಗರದ ಒಂದೇ ಶಾಖೆಯಲ್ಲಿ 100 ಕೆ.ಜಿ. ಚಿನ್ನ ಅಡವಿಟ್ಟು ಕೊಂಡಿದ್ದಾರೆ. ಅಸಲಿಗೆ ಭದ್ರತೆಯಾಗಿಡಬೇಕಾಗಿದ್ದ ಚಿನ್ನ ಮಾತ್ರ ನಾಪತ್ತೆಯಾಗಿದೆ.
ರೈತರಿಗೆ ಪ್ರಾಮಾಣಿಕವಾಗಿ ನೀಡಬೇಕಾದ ಸಾಲವನ್ನು ಕೃಷಿಯೇತರ ಚಟುವಟಿಕೆಗ ಳಿಗೆ ನೀಡಲಾಗಿದ್ದು, ರೈತರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸಿದರು.