ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ಖರೀದಿ ಆಂದೋಲನ

Rashmi Kasaragodu
Updated On : 25 Jul 2014, 11:08 am

ಶಿವಮೊಗ್ಗ:  ದೇಶದಲ್ಲಿ ಏನೇನೋ ಉದ್ದೇಶ ಇಟ್ಟುಕೊಂಡು ಆಂದೋಲನಗಳು ನಡೆಯುತ್ತಿವೆ. ಈ ಆಂದೋಲನಗಳ ನಡುವೆ ಅಚ್ಚರಿಯ ಆಂದೋಲನಕ್ಕೆ ಶಿವಮೊಗ್ಗ ರೋಟರಿ ಇದೀಗ ಚಾಲನೆ ನೀಡಿದೆ.
ಅದುವೇ, ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ಖರೀದಿ ಆಂದೋಲನ. ಇತ್ತೀಚೆಗಷ್ಟೆ ಸಾವಿರ ಸೋಲಾರ್ ಬೀದಿ ದೀಪ ಯೋಜನೆ ಕಾರ್ಯಗತ ಮಾಡಲು ಮುಂದಾಗಿರುವ ಶಿವಮೊಗ್ಗ ರೋಟರಿ ಈಗ ಮತ್ತೊಂದು ಆಂದೋಲನದ ಮೂಲಕ ಹೊಸ ಚಿಂತನೆಯನ್ನು ಸಾರ್ವಜನಿಕ ವಲಯದಲ್ಲಿ ಹರಿಯಬಿಟ್ಟಿದೆ.
ಮೊದಲ ಹೆಜ್ಜೆ:  ಕೇಂದ್ರ ಸರ್ಕಾರ ಜನರಿಗೆ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ ಹಂಚುತ್ತಿದೆ. ಆ ಸಬ್ಸಿಡಿ ಬರುವಷ್ಟು ಹಣವನ್ನು ಹೊಂದಿಸುವ ಅನುಕೂಲ ಇರುವವರು ಆ ಸಬ್ಸಿಡಿಯನ್ನು ಬಿಟ್ಟುಕೊಟ್ಟರೆ ಅದರ ಸದುಪಯೋಗ ಬಡವರಿಗೆ ತಲುಪುತ್ತದೆ. ಆ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ನಗರ ರೋಟರಿ ಕ್ಲಬ್ ಇಟ್ಟಿದೆ. ಈ ಸಬ್ಸಿಡಿ ರಹಿತ ಗ್ಯಾಸ್ ಸಿಲಿಂಡರ್ ಖರೀದಿ ಆಂದೋಲನದಲ್ಲಿ ಭಾಗವಹಿಸಿ ತಾಯ್ನೆಲಕ್ಕೆ ಕಿರುಕಾಣಿಕೆ ನೀಡುವಂತೆ ಅದು ಕರೆ ನೀಡಿದೆ.
ಭಾರತ ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ದೇಶ. ನೈಸರ್ಗಿಕ ಸಂಪತ್ತಿನಲ್ಲಿ, ಸಿರಿವಂತಿಕೆಯನ್ನು ಹೊಂದಿದ್ದರೂ ಆರ್ಥಿಕವಾಗಿ ಕಡು ಬಡತನದಲ್ಲಿ ಬಳಲುತ್ತಿರುವ ಹಲವು ಮಕ್ಕಳನ್ನು ತನ್ನ ಮಡಿಲಲ್ಲಿ ಹೊಂದಿರುವ ದೇಶ. ಈ ಬಡಜನರ ಏಳಿಗೆಗಾಗಿ ಹಲವು ಸರ್ಕಾರಗಳು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರೋಟರಿ ಕ್ಲಬ್ ಶಿವಮೊಗ್ಗ ಈ ನಿಟ್ಟಿನಲ್ಲಿ ಹೊಸದೊಂದು ಹೆಜ್ಜೆಯನ್ನು ಇಟ್ಟಿದೆ ಎಂದು ರೋಟರಿ ಅಧ್ಯಕ್ಷೆ ಬಿ.ವಿ.ಲಕ್ಷ್ಮೀದೇವಿ ಗೋಪಿನಾಥ್ ತಿಳಿಸಿದ್ದಾರೆ.
ಪ್ರತಿ ಸಬ್ಸಿಡಿ ಸಿಲಿಂಡರ್ ಹಾಗೂ ಸಬ್ಸಿಡಿ ರಹಿತ ಸಿಲಿಂಡರ್‌ಗೆ 300 ರುಪಾಯಿಗಿಂತ ಹೆಚ್ಚು ವ್ಯತ್ಯಾಸವಿದೆ. ಯಾರೆಲ್ಲರಿಗೆ ಸಬ್ಸಿಡಿ ರಹಿತವಾಗಿ ಸಿಲಿಂಡರ್ ಖರೀದಿಸಲು ಸಾಧ್ಯವಾಗುತ್ತದೋ ಅವರೆಲ್ಲ ಖರೀದಿಸಿದರೆ, ಸರ್ಕಾರದ ಮೇಲೆ ಹೊರೆಯೂ ಕಡಿಮೆಯಾಗುತ್ತದೆ, ಆರ್ಥಿಕವಾಗಿ ಹಿಂದುಳಿದವರಿಗೂ ಸಾಕಷ್ಟು ಅನುಕೂಲವಾಗಲಿದೆ ಎಂಬುದು ಅವರ ವಿವರಣೆ.
ಭವಿಷ್ಯದಲ್ಲಿ ಸರ್ಕಾರ ಸಬ್ಸಿಡಿ ನೀಡುವುದನ್ನು ಹಿಂತೆಗೆದುಕೊಳ್ಳುವ ಪರಿಸ್ಥಿತಿ ಎದುರಾಗಲಿದೆ. ಇಂತಹ ಸಂದರ್ಭದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಹೆಚ್ಚಿನ ಹೊರೆ ಬೀಳಲಿದೆ. ನಾವು ಸಬ್ಸಿಡಿ ರಹಿತವಾಗಿ ಸಿಲಿಂಡರ್ ಖರೀದಿಸುವುದರಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಸಬ್ಸಿಡಿ ಮುಂದುವರಿಸಲು ಸರ್ಕಾರಕ್ಕೂ ಸಹಕಾರ ನೀಡಿದಂತಾಗುತ್ತದೆ ಎಂದು ಹೇಳಿದರು.
ಜಾಗೃತಿ ಕಾರ್ಯಕ್ರಮ:  ಗ್ಯಾಸ್ ಕಂಪನಿ ಪ್ರತಿನಿಧಿಯವರೇ ಶಿವಮೊಗ್ಗಕ್ಕೆ ಆಗಮಿಸಿ ಜಾಗೃತಿ ಕಾರ್ಯಕ್ರಮ ನಡೆಸಲಿದ್ದಾರೆ ಮತ್ತು ಸಬ್ಸಿಡಿ ರಹಿತ ಸಿಲಿಂಡರ್ ಖರೀದಿಗೆ ನೋಂದಣಿ ಮಾಡಿಸಿಕೊಳ್ಳುವರು. ಸದ್ಯ ನಮ್ಮ ರೋಟರಿಯಲ್ಲಿ 250 ಸದಸ್ಯರಿದ್ದು, ಅವರನ್ನು ಈ ವಿಚಾರದಲ್ಲೇ ಪ್ರೇರೇಪಿಸುತ್ತೇವೆ. ಜೊತೆಗೆ ಸಾರ್ವಜನಿಕರಿಗೂ ಕೋರುತ್ತೇವೆ ಎಂದ ಅವರು, ಸಣ್ಣ ಮಟ್ಟದಲ್ಲಿ ಆರಂಭವಾಗುವ ಈ ಆಂದೋಲನ ಮುಂದಿನ ದಿನಗಳಲ್ಲಿ ಹಂತಹಂತವಾಗಿ ವಿಸ್ತಾರಗೊಳ್ಳಲಿದೆ ಎಂದು ತಿಳಿಸಿದರು. ಆಂದೋಲನದಲ್ಲಿ ಭಾಗಿಯಾಗಲು ಇಚ್ಚಿಸುವವರು ಮೊ.ಸಂ.97407 60061, 94481 22646, 94481 49297ಗೆ ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement