ಡಿಸಿಸಿ ಬ್ಯಾಂಕಲ್ಲೀಗ ಚಿನ್ನದ ನಕಲಿ ಸಾಲ!
ಶ್ರೀಕಾಂತ ಭಟ್
ಶಿವಮೊಗ್ಗ: ನಕಲಿ ಚಿನ್ನ ಮಾರಾಟ, ಅಸಲಿ ಚಿನ್ನವೆಂದು ನಕಲಿ ಚಿನ್ನ ವ್ಯಾಪಾರದಂತಹ ಘಟನೆಗಳು ಆಗಿಂದಾಗ್ಗೆ ಕೇಳಲ್ಪಡುತ್ತಿದ್ದ ಸಾರ್ವಜನಿಕರು, ಇದೀಗ ಡಿಸಿಸಿ ಬ್ಯಾಂಕ್ ಒಳಗಿನ ಕಳ್ಳರ ಗ್ಯಾಂಗ್ ನಡೆಸಿರುವ ರು. 100 ಕೋಟಿ ವರೆಗಿನ ಅವ್ಯವಹಾರದಿಂದ ಕಂಗಾಲಾಗಿದ್ದಾರೆ.
ಬ್ಯಾಂಕಿನಲ್ಲಿ ಚಿನ್ನವೇ ಇಲ್ಲ. ಚಿನ್ನದ ಮೇಲೆ ಸಾಲ ಕೊಡಲಾಗಿದೆ. ಚಿನ್ನ ಅಸಲಿಯಲ್ಲ, ಬ್ಯಾಂಕುಗಳಲ್ಲಿ ಹೀಗೂ ಆಗುತ್ತದೆಯೇ ಎಂದು ಗ್ರಾಹಕರು, ಸಾರ್ವನಿಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಭಾರೀ ತಿಮಿಂಗಿಲಗಳ ಪಡಪೋಶಿ ವಹಿವಾಟು ಬೆಳಕಿಗೆ ಬರುತ್ತಿದ್ದಂತೆಯೇ ನಂಬಿಕಸ್ತ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಸಮಸ್ತ ವಹಿವಾಟಿನ ಮೇಲೆಯೇ ಅನುಮಾನ ಬರುವಂತಾಗಿದೆ. ಅಷ್ಟೇ ಅಲ್ಲದೇ, ಇತ್ತೀಚಿನ ವರ್ಷಗಳಲ್ಲಿ ಜಿಲ್ಲೆಯ ಅತಿ ದೊಡ್ಡ ಹಗರಣ ಇದಾಗಿದೆ.
ನಂಬಲಸಾಧ್ಯ ದೋಖಾ: ಡಿಸಿಸಿ ಬ್ಯಾಂಕ್ನಲ್ಲಿ ನಡೆದಿರುವುದು ನಂಬಲು ಅಸಾಧ್ಯವಾದಂತಹ ದೋಖಾ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ಬ್ಯಾಂಕಿನ ಗ್ರಾಹಕ (ಶಿವಕುಮಾರ್ ಹೆಸರು ಬದಲಿಸಲಾಗಿದೆ) ಅಭಿಪ್ರಾಯಪಟ್ಟಿದ್ದಾರೆ.
ಗ್ರಾಹಕರು ಅಡವಿಟ್ಟ ಚಿನ್ನ ಬ್ಯಾಂಕ್ನಲ್ಲಿದೆಯೋ ಇಲ್ಲವೇ, ಅಸಲಿಯೋ, ನಕಲಿಯೋ ಎಂದು ಪರಿಶೀಲಿಸುವ ಸಂದರ್ಭ ಎದುರಾಗಿದೆ ಎಂದು ಬ್ಯಾಂಕಿನ ಇಬ್ಬರು ಮಹಿಳಾ ಗ್ರಾಹಕರು ಆತಂಕವ್ಯಕ್ತಪಡಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ ಹಗರಣ ನಡೆದ ಶಾಖೆಗೆ ಭೇಟಿಕೊಟ್ಟಿದ್ದ ಅವರು 'ಕನ್ನಡಪ್ರಭ' ಎದುರು ಈ ಆತಂಕ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೇ, ಬಂಗಾರ ಅಡಮಾನ ಸಾಲ ಪಡೆದವರು ಒಮ್ಮೆ ತಮ್ಮ ಚಿನ್ನವನ್ನು ಪರಿಶೀಲಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಆತಂಕಕ್ಕೆ ಕಾರಣ: ಸದ್ಯಕ್ಕೆ ತನಿಖೆಯಾಗಿರುವುದು 4522 ಖಾತೆಗಳ ಪೈಕಿ ಕೇವಲ 785 ಖಾತೆಗಳಷ್ಟೆ. ಇಷ್ಟು ತನಿಖೆಯಲ್ಲೇ ಶೇ.60ಕ್ಕಿಂತ ಹೆಚ್ಚು ಖಾತೆಗಳ ಮೂಲಕ ವಂಚನೆ ನಡೆದಿರುವುದು ಗೊತ್ತಾಗಿದೆ. ಸದ್ಯದ ತನಿಖೆಯ ಮಾಹಿತಿ ಪ್ರಕಾರ 185 ಖಾತೆಗಳಿಗೆ ಚಿನ್ನವೇ ಇಲ್ಲದೆ ಕೇವಲ ರಸೀದಿ ಆಧರಿಸಿ ಸಾಲ ನೀಡಲಾಗಿದೆ. ಅಂದರೆ ಚಿನ್ನ ಎಲ್ಲಿ ಹೋಯಿತು ಎಂಬ ಪ್ರಶ್ನೆ ಏಳುತ್ತದೆ. ಅಷ್ಟೇ ಅಲ್ಲದೇ, ಇದು ಇವರು ಬೋಗಸ್ ಖಾತೆದಾರರಿಗೆ ಸಾಲ ಕೊಟ್ಟಿದ್ದಾರೆಯೋ ಅಥವಾ ಗ್ರಾಹಕರ ಚಿನ್ನವನ್ನೇ ಮಾಯ ಮಾಡಿದ್ದಾರೋ ಎಂಬುದು ಇನ್ನಷ್ಟೆ ಬಹಿರಂಗವಾಗಬೇಕಾಗಿದೆ. 486 ಖಾತೆಗಳ ಸಾಲಕ್ಕೆ ನಕಲಿ ಚಿನ್ನ ನೀಡಿರುವ ಸಂಗತಿ ಸರ್ಕಾರವೇ ಕಕ್ಕಾಬಿಕ್ಕಿಯಾಗುವಂತೆ ಮಾಡಿದೆ.
ಪರಿಶೀಲನೆ ಅಗತ್ಯ: ಅಂಕಿಅಂಶಗಳನ್ನು ಗಮನಿಸಿದರೆ ಈ ಶಾಖೆಯಲ್ಲಿ ಟೋಪಿ ವ್ಯವಹಾರ ನಡೆದಿದ್ದೇ ಹೆಚ್ಚೆಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗುತ್ತದೆ. ಈ ಪ್ರಕರಣದಲ್ಲಿ ದೊಡ್ಡ ಜಾಲ ಕಾರ್ಯನಿರ್ವಹಿಸಿರುವುದು ಕಂಡುಬರುತ್ತಿದೆ. ಮೇಲ್ಮಟ್ಟದಿಂದ ಕೆಳಹಂತದ ವರೆಗಿನವರೂ ಕೈಯಾಡಿಸಿರುವ ಸೂಕ್ಷ್ಮತೆ ಪೊಲೀಸರಿಗೆ ಅರಿವಿಗೆ ಬಂದಿದೆ.
ಇನ್ನೊಂದೆಡೆ ಡಿಸಿಸಿ ಬ್ಯಾಂಕ್ನಲ್ಲಿ ಆಭರಣ ಅಡಮಾನ ಮಾಡಿ ಸಾಲ ಮಾಡಿರುವ ಗ್ರಾಹಕರು ತಮ್ಮ ಚಿನ್ನವನ್ನು ಖಚಿತಪಡಿಸಿಕೊಳ್ಳಬೇಕಾದ ಅನಿರ್ವಾಯತೆ ಎದುರಾಗಿದೆ. ಸರ್ಕಾರ ಡಿಸಿಸಿ ಬ್ಯಾಂಕ್ನ ಎಲ್ಲಾ 27 ಶಾಖೆಗಳ ವ್ಯವಹಾರ ತನಿಖೆಗೊಳಪಡಿಸಲು ಮುಂದಾಗಿದೆ.
ಅಕ್ರಮ ಮುಚ್ಚಿ ಹಾಕುವ ಪ್ರಯತ್ನ
ಜು.17ರಂದು ಡಿಸಿಸಿ ಬ್ಯಾಂಕ್ ನಗರ ಶಾಖೆಯ ಹಣಕಾಸು ಅವ್ಯವಹಾರ ಕುರಿತಂತೆ ಒಂದು ಪ್ರಕರಣ ದಾಖಲಾಯಿತು. ಅದರ ತನಿಖೆಯ ಬೆನ್ನು ಹತ್ತಿದಾಗ ಇದು ಲೆಕ್ಕ ಸಿಗದಷ್ಟು ದೊಡ್ಡ ಅವ್ಯವಹಾರ ಎಂದು ಗೊತ್ತಾಗಿದೆ. ತಕ್ಷಣವೇ ಜಿಲ್ಲಾ ಎಸ್ಪಿ ಕೌಶಲೇಂದ್ರ ಕುಮಾರ್ ಅವರು ಖುದ್ದು ಆಸಕ್ತಿ ತೆಗೆದುಕೊಂಡು ಪ್ರಕರಣವನ್ನು ಜಿಲ್ಲಾ ಅಪರಾಧ ಪತ್ತೆ ದಳಕ್ಕೆ ವಹಿಸಿದ್ದಾರೆ. ಡಿಸಿಬಿಐ ಇನ್ಸ್ಪೆಕ್ಟರ್ ಜೈರಾಜ್ ನೇತೃತ್ವದ ತಂಡ ಬೇಟೆ ಆರಂಭಿಸುವ ಮುಂಚಿತವಾಗಿ ಈ ಪ್ರಕರಣವನ್ನು ಮುಚ್ಚಿಹಾಕುವ ಎಲ್ಲಾ ಪ್ರಯತ್ನ ನಡೆದಿತ್ತು. ವಂಚನೆಯಾದ ಹಣವನ್ನು ವಾಪಾಸು ಕಟ್ಟಿಸುವ ಮತ್ತು ರಾಜಕೀಯ ಒತ್ತಡ ತಂದು ಪ್ರಕರಣ ಹೊರಬಾರದಂತೆ ತಡೆಯುವ ಎಲ್ಲಾ ಚಟುವಟಿಕೆಗಳೂ ತೆರೆಮರೆಯಲ್ಲಿ ನಡೆದಿತ್ತು. ಆದರೆ, ಹಗರಣದ ಮುಂದಾಳುಗಳಿಗೆ ಪ್ರಕರಣವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಸೋತುಹೋದರು.