ಶಿವಮೊಗ್ಗ ಪಾಲಿಕೆ ಚುನಾವಣೆ: ಆಯೋಗ, ಸರ್ಕಾರಕ್ಕೆ 'ಹೈ' ನೋಟಿಸ್
ಬೆಂಗಳೂರು: ಶಿವಮೊಗ್ಗದ ನೂತನ ನಗರಪಾಲಿಕೆಗೆ ಚುನಾವಣೆ ನಡೆಸುವಂತೆ ನಿರ್ದೇಶನ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ನಗರಸಭೆ ಅಧ್ಯಕ್ಷ, ರಾಜ್ಯ ಚುನಾವಣಾ ಆಯೋಗ ಹಾಗೂ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಪಾಲಿಕೆಯ ಮೇಯರ್ ಹುದ್ದೆಗೆ ಪ್ರಬಲ ಆಕಾಂಕ್ಷಿಗಳಾದ ಅರವಿಂದ್ ಹಾಗೂ ಎನ್.ರವಿಕುಮಾರ್ ಪಾಲಿಕೆ ಚುನಾವಣೆ ನಡೆಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾ. ನಾರಾಯಣಸ್ವಾಮಿ ಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ.
ಶಿವಮೊಗ್ಗದ ನಗರ ಸಭೆಯನ್ನು ಪಾಲಿಕೆಯಾಗಿ ಉನ್ನತೀಕರಿಸಿ 2013 ಡಿಸಂಬರ್ 20ರಂದು ಸರ್ಕಾರ ಆದೇಶ ಹೊರಡಿಸಿ ಕರ್ನಾಟಕ ಮುನ್ಸಿಪಲ್ ಕಾಯ್ದೆಗೆ ತಿದ್ದುಪಡಿ ತಂದಿತ್ತು. ತಿದ್ದುಪಡಿ ಅನ್ವಯ ನಗರ ಸಭೆಗೆ ಚುನಾಯಿತ ಪ್ರತಿನಿಧಿಗಳನ್ನೇ ಪಾಲಿಕೆಯಲ್ಲಿ ಮುಂದುವರಿಸಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಕ್ರಮವಾಗಿ ಮೇಯರ್ ಹಾಗು ಉಪಮೇಯರ್ ಹುದ್ದೆಗೇರಿಸುವಂತೆ ಸೂಚಿಸಿತ್ತು. ಸರ್ಕಾರದ ಈ ಕ್ರಮ ಕಾನೂನು ಬಾಹಿರವಾಗಿದ್ದು, ತಿದ್ದುಪಡಿ ರದ್ದುಪಡಿಸಿ ನೂತನವಾಗಿ ಚುನಾವಣೆ ನಡೆಸುವಂತೆ ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಸಂವಿಧಾನದ 243(ಯು) ಪರಿಚ್ಛೇದದ ಪ್ರಕಾರ, ಯಾವುದೇ ಪಾಲಿಕೆ ರಚನೆಯಾದ ಆರು ತಿಂಗಳಲ್ಲಿ ಚುನಾವಣೆ ನಡೆಸಬೇಕು. ಪಾಲಿಕೆಗೆ ಪರಿವರ್ತಿಸಿದ ನಂತರ ನಗರ ಸಭೆ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಆದ್ದರಿಂದ ಸದಸ್ಯರನ್ನು ಪಾಲಿಕೆಯಲ್ಲಿ ಮುಂದುವರಿಸಲು ಅವಕಾಶವಿಲ್ಲದ ಕಾರಣ ತಿದ್ದುಪಡಿ ರದ್ದುಪಡಿಸಿ ಚುನಾವಣೆ ನಡೆಸುವಂತೆ ನಿರ್ದೇಶನ ನೀಡುವಂತೆ ಅರ್ಜಿದಾರರು ಅರ್ಜಿಯಲ್ಲಿ ಕೋರಿದ್ದರು.
ವಿಚಾರಣೆ ನಡೆಸಿದ ಏಕಸದಸ್ಯ ಪೀಠ, ನಗರಸಭೆ ಅಧ್ಯಕ್ಷ, ರಾಜ್ಯ ಚುನಾವಣಾ ಆಯೋಗ ಹಾಗು ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.