ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಂಸ್ಕೃತದಲ್ಲಿ ಸಂಸ್ಕೃತಿ: ನಾರಾಯಣ್

Rashmi Kasaragodu
Updated On : 26 Jul 2014, 10:59 am

ಶಿವಮೊಗ್ಗ: ಸಂಸ್ಕೃತ ವೈಜ್ಞಾನಿಕ ಹಿನ್ನೆಲೆಯುಳ್ಳ ಭಾಷೆ. ಯಾವುದೇ ಪ್ರಾಂತಕ್ಕೆ ಹೋದರು ಈ ಭಾಷೆಯಲ್ಲಿ ಬದಲಾವಣೆ ಇಲ್ಲ, ಸಂಸ್ಕೃತದಲ್ಲಿ ಸಂಸ್ಕೃತಿ ಇದೆ. ದೇಶದಲ್ಲಿ ಸಂಸ್ಕೃತವನ್ನು ಕಡ್ಡಾಯವಾಗಿ ಕಲಿಸುವಂತಾದರೆ ಜನರಲ್ಲಿ ಸಾಮರಸ್ಯ ಮೂಡಿಸಲು ಸಾಧ್ಯ ಎಂದು ವಿ.ನಾರಾಯಣ ಭಟ್ ಅಭಿಪ್ರಾಯಪಟ್ಟರು.
ಇಲ್ಲಿನ ನಾಗಸುಬ್ರಹ್ಮಣ್ಯ ದೇವಾಲಯದಲ್ಲಿ ಸಂಸ್ಕೃತ ಭಾರತಿ ಸರಳ ಸಂಸ್ಕೃತ ಕಲಿಕಾ ತರಗತಿ ಉದ್ಘಾಟಿಸಿ ಮಾತನಾಡಿದ ಅವರು, ಸಂಸ್ಕೃತ ಭಾಷೆಯಲ್ಲಿ ಇಡೀ ರಾಷ್ಟ್ರದ ಜನರನ್ನು ಒಂದು ಗೂಡಿಸುವ ಶಕ್ತಿ ಇದೆ ಎಂದು ಹೇಳಿದರು.
ಬ್ರಿಟಿಷರು ನಮ್ಮ ದೇಶ ಆಳುವಾಗ ಸಂಸ್ಕೃತಕ್ಕೆ ಮತೀಯ ಹಣೆಪಟ್ಟಿ ಕಟ್ಟಿ ಜನಸಾಮಾನ್ಯರಿಂದ ದೂರ ಮಾಡುವಲ್ಲಿ ಯಶಸ್ವಿಯಾದರು. ಸ್ವಾತಂತ್ರ್ಯ ಬಂದ ನಂತರ ಅಂಬೇಡ್ಕರ್ ದೇಶದ ಸಂಪರ್ಕ ಭಾಷೆ ಸಂಸ್ಕೃತವಾಗಬೇಕು ಎಂದು ಆಶಯ ವ್ಯಕ್ತಪಡಿಸಿದ್ದರು. ಆದರೆ ಅಂದಿನ ನಮ್ಮ ಜನಪ್ರತಿನಿಧಿಗಳು ಅವರ ಆಶಯಕ್ಕೆ ಮನ್ನಣೆ ಕೊಡಲಿಲ್ಲ ಎಂದು ವಿಷಾದಿಸಿದರು.
ಇಂದು ಸಂಸ್ಕೃತವನ್ನು ಕಲಿತ ಹೆಣ್ಣುಮಕ್ಕಳು ಸುಖ ಸಂಸಾರದ ಜೊತೆಗೆ ತಮ್ಮ ಮನೆಯಲ್ಲಿ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ ಈ ವಿಷಯದಲ್ಲಿ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯ ಹೆಣ್ಣುಮಕ್ಕಳು ಶಾಲೆಗಳಲ್ಲಿ ಸಂಸ್ಕೃತವನ್ನು ಹೆಚ್ಚು ಹೆಚ್ಚು ಕಲಿಯುತ್ತಿದ್ದಾರೆ ಎಂದು ಕೆಲವೊಂದು ಉದಾಹರಣೆ ನೀಡಿದರು.
ಸಂಸ್ಕೃತ ಕಲಿಕೆಯಿಂದ ಮನಸ್ಸಿಗೆ ಹೆಚ್ಚು ಹುಮ್ಮಸ್ಸು ನೀಡುತ್ತದೆ, ಮೇಧಾಶಕ್ತಿ ಹೆಚ್ಚುತ್ತದೆ ಈ ವಿಷಯವನ್ನು ವಿಜ್ಞಾನಿ ಡಾ.ರಾಜಾರಾಮಣ್ಣನವರು ಹೇಳಿದ್ದ ವಿಷಯ ತಿಳಿಸುತ್ತ ಜೀವಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ, ವೇದಗಣಿತ ಇವಗಳಲ್ಲಿ ಪರಿಣಿತಿ ಹೊಂದಬೇಕಾದರೆ ಅವರಿಗೆ ಸಂಸ್ಕೃತದ ಜ್ಞಾನ ಅವಶ್ಯಕವಾಗಿ ಇರಲೇಬೇಕು ನಮ್ಮ ಇಂದಿನ ವಿಜ್ಞಾನ ವಿದ್ಯಾರ್ಥಿಗಳು ಸಂಸ್ಕೃತ ಕಲಿತರೆ ಅವರ ಸಂಶೋಧನೆಗೆ ಬಹಳ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ಜರ್ಮನ್ ದೇಶದವರು ನಮ್ಮ ದೇಶದಿಂದ ಬಹುಮುಖ್ಯವಾದ ಕೆಲವು ಸಂಸ್ಕೃತ ಗ್ರಂಥಗಳನ್ನು ತೆಗೆದುಕೊಂಡು ಹೋದ ಪ್ರಯುಕ್ತ ಇಂದು ಸಂಸ್ಕೃತದ ಹೆಚ್ಚಿನ ಅಧ್ಯಯನಕ್ಕೆ ನಾವು ಜರ್ಮನಿಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.
ದೇವಾಲಯ ಅಧ್ಯಕ್ಷ ನ.ರಾ.ವೆಂಕಟೇಶ್ ಇದ್ದರು. ಸಂಸ್ಕೃತ ಭಾರತಿ ಪ್ರಾಂತ ಮಂತ್ರಿ ಮತ್ತೂರು ಶ್ರೀನಿಧಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅರ್ಚಕ ಸಂದೇಶ್ ಉಪಾದ್ಯ ಸ್ವಾಗತಿಸಿದರು. ರಾಮಲಿಂಗಮ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement