ಮಹಿಳೆಯರ ರಕ್ಷಣೆ ಕುರಿತ ಜಾಗೃತಿ ಕಾರ್ಯಕ್ರಮ
ಸೊರಬ: ಯಾವುದೇ ಸಂದರ್ಭದಲ್ಲಿ ಮಹಿಳೆಯರಿಗೆ ಹಿಂಸೆ ಉಂಟಾದರೆ ಕೂಡಲೇ ಪೊಲೀಸ್ ಠಾಣೆಯನ್ನು ದೂರವಾಣಿ ಮೂಲಕ ಸಂಪರ್ಕಿಸಿದರೆ ರಕ್ಷಣೆ ನೀಡುವುದರೊಂದಿಗೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ವೃತ್ತ ನಿರೀಕ್ಷಕ ನಾಗರಾಜ ತಿಳಿಸಿದರು. ಇಲ್ಲಿನ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ನಲ್ಲಿ ಪೊಲೀಸ್ ಇಲಾಖೆ, ಸಾಂತ್ವನ ಮಹಿಳಾ ಸಹಾಯವಾಣಿ, ಲಯನ್ಸ್ ಕ್ಲಬ್ ಹಾಗೂ ವಸತಿ ನಿಲಯ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹಿಳೆಯರ ರಕ್ಷಣೆ ಮತ್ತು ಪ್ರಸಕ್ತ ವಿದ್ಯಮಾನಗಳ ಕುರಿತ ಜಾಗೃತಿ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದರು. ಭೀಮನಗೌಡ, ಪ್ರಶಾಂತ ಎಚ್.ಎಂ. ನಿಲಯ ಪಾಲಕಿ ಪುಷ್ಪಲತಾ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಅಧ್ಯಕ್ಷ ರಾಮರಾವ್ ನಾಡಿಗ್, ಲಯನೆಸ್ ಅಧ್ಯಕ್ಷೆ ಸರ್ವಮಂಗಳಾ, ಸುಧಾಕರ ನಾಯ್ಕ್, ಶೃತಿ, ರಾಜಶೇಖರಗೌಡ, ಸುಮಾ, ಶೋಭಾ, ಶಿಲ್ಪಾ ಪಾಲ್ಗೊಂಡಿದ್ದರು.
ಕಲಬೆರಕೆ ವಿರುದ್ಧ ಕ್ರಮ ಅಗತ್ಯ: ಪುಟ್ಟಸ್ವಾಮಿ
ಸೊರಬ: ಅನ್ನಾಂಗದ ಕೊರತೆ ನೀಗಲು ಮಕ್ಕಳು ಸಮತೋಲನ ಆಹಾರ ಸೇವಿಸಿಬೇಕು. ಈ ಹಿಂದೆ ಆಹಾರ ಬೆಳೆಯಲು ಎಂಡೋಸಲ್ಫಾನ್ ಕ್ರಿಮಿನಾಶಕ ಬಳಸಿದ್ದರ ಪರಿಣಾಮ ಸಾವಿರಾರು ಜನ ಇಂದೂ ಅನಾರೋಗ್ಯಕ್ಕೀಡಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ, ಫಸಲು ಬೆಳೆಯುವಾಗ ಆರೋಗ್ಯದ ಮೇಲೆ ಹಾನಿಯುಂಟು ಮಾಡುವ ಕ್ರಿಮಿನಾಶಕ ಉಪಯೋಗಿಸದಂತೆ ಕಟ್ಟುನಿಯಮ ಕೈಗೊಳ್ಳಲು ಸರ್ಕಾರ ಮುಂದಾಗಬೇಕು ಎಂದು ವಕೀಲ ಪುಟ್ಟಸ್ವಾಮಿ ಒತ್ತಾಯಿಸಿದರು. ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ನಡೆದ ಅಪೌಷ್ಠಿಕತೆ ಕುರಿತ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಸಹಾಯಕ ಸರ್ಕಾರಿ ಅಭಿಯೋಜಕ ಎಂ.ಡಿ.ಮಾಂಗಲಿ ಕಲಬೆರಕೆ ಆಹಾರ ಪದಾರ್ಥ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು. ವಕೀಲರ ಸಂಘದ ಅಧ್ಯಕ್ಷ ತಮ್ಮಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಕೃಷ್ಣಮೂರ್ತಿ, ವಕೀಲರುಗಳಾದ ಸುಧಾಕರ ಪಿ.ನಾಯಕ್, ಅಶೋಕ್, ಎಚ್.ಎಂ.ಪ್ರಶಾಂತ್, ವಿಜಯಕುಮಾರ್, ಎಪಿಪಿ ಸಂಜೀವ ಜೋ, ಶಬ್ಬೀರ್ ಅಹ್ಮದ್ ಉಪಸ್ಥಿತರಿದ್ದರು.