ಸ್ಥಳದ ಸಮಸ್ಯೆ ಕೂಡಲೇ ಬಗೆಹರಿಸಲು ಒತ್ತಾಯ
ಶಿವಮೊಗ್ಗ: ಕೇಂದ್ರದ ಜನ್ನರ್ಮ್ ಯೋಜನೆಗೆ ಜಿಲ್ಲಾಧಿಕಾರಿಯವರು ಊರುಗಡೂರಿನ ಸೂಡಾ ಜಾಗದಲ್ಲಿ ಗುರುತು ಮಾಡಿದ್ದ 6 ಎಕರೆ ಜಾಗವನ್ನು ಮಂಗಳೂರಿನ ಇಂಡಿಯನ್ ಆಯಿಲ್ ಕಾರ್ಪೋರೇಷನ್ ಅಧಿಕಾರಿಗಳ ತಂಡ ಸ್ಥಳಪರಿಶೀಲನೆ ನಡೆಸಿದ್ದಾರೆ. ಈ ಜಾಗದಲ್ಲಿ ಹೈಪವರ್ ಟೆನ್ಷನ್ ವಿದ್ಯುತ್ ಲೈನ್ ಹೋಗಿರುವುದರಿಂದ ಈ ಜಾಗದಲ್ಲಿ ಬಸ್ ಡಿಪೋ ನಿರ್ಮಿಸಲು ಒಪ್ಪಿಗೆ ನೀಡದೆ ತಿರಸ್ಕರಿಸಿದ್ದಾರೆ. ಹೀಗಾಗಿ ಕೂಡಲೇ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಕೆಎಸ್ಆರ್ಟಿಸಿಯ ಮ್ಯಾನೇಜಿಂಗ್ ಡೈರೆಕ್ಟರ್, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರನ್ನು ಶಿವಮೊಗ್ಗಕ್ಕೆ ಬರಮಾಡಿಕೊಂಡು ಜಿಲ್ಲಾಡಳಿತ ಜೊತೆ ಸಭೆ ನಡೆಸಿ ಜಾಗದ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕೆಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಹಾಗೂ ಅಣ್ಣಾಹಜಾರೆ ಹೋರಾಟ ಸಮಿತಿ ಒತ್ತಾಯಿಸಿವೆ. ಯೋಜನೆಯ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕೆಂದು ಒತ್ತಾಯಿಸುವುದಾಗಿ ಸಂಘಟನೆಯ ಕಲ್ಲೂರು ಮೇಘರಾಜ್, ರವಿ, ಅಶೋಕ್ ಯಾದವ್ ತಿಳಿಸಿದರು.