ಡಿಸಿಸಿಬಿಯಲ್ಲೀಗ ಠೇವಣಿ ಹಿಂಪಡೆ ಪರ್ವ
ಮುಳುಗುತ್ತಿರುವ ಹಡಗಿನಂತಾದ ಬ್ಯಾಂಕ್ ಟಿ ಆಡಳಿತ ಮಂಡಳಿಗೆ ನುಂಗಲಾಗದ ತುತ್ತಾದ ಅವ್ಯವಹಾರ
ಟಿ ಶ್ರೀಕಾಂತ ಭಟ್
ಶಿವಮೊಗ್ಗ: ಚಿನ್ನಾಭಾರಣ ಅಡಮಾನ ಅವ್ಯವಹಾರದಿಂದ ಕುಗ್ಗಿ ಹೋಗಿರುವ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಡಿಸಿಸಿಬಿ) ಇದೀಗ ಮತ್ತೊಂದು ಸಂಕಟಕ್ಕೆ ಸಿಲುಕಿದೆ. ಡಿಸಿಸಿಬಿಯಲ್ಲಿ ವಿವಿಧ ಪ್ರಭೇದದ ಸಹಕಾರ ಸಂಘಗಳು ಇಟ್ಟ ಠೇವಣಿಯ ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಆರಂಭವಾಗಿದ್ದು, ಇದು ಡಿಸಿಸಿಬಿ ಆಡಳಿತ ಮಂಡಳಿಗೆ ನುಂಗಲಾರದ ತುತ್ತಾಗಿದೆ.
ಒಂದು ಪ್ರಮಾಣದಲ್ಲಿ ಠೇವಣಿ ಕೈಬಿಟ್ಟು ಹೋದರೆ ಬ್ಯಾಂಕಿನ ಭವಿಷ್ಯದ ಪ್ರಶ್ನೆ ಬರುತ್ತದೆ. ಅರ್ಥಾತ್, ದೊಡ್ಡ ಪ್ರಮಾಣದಲ್ಲಿ ಠೇವಣಿದಾರರು ತಮ್ಮ ಠೇವಣಿ ಹಿಂತೆಗೆದುಕೊಂಡರೆ ಬ್ಯಾಂಕ್ ಆರ್ಥಿಕ ದುಸ್ಥಿತಿಗೆ ತಳ್ಳಲ್ಪಡುತ್ತದೆ. ಹೀಗಾಗಿ ಸಾರ್ವಜನಿಕರ ಠೇವಣಿ ಹೊರತಾಗಿ ದೊಡ್ಡ ಠೇವಣಿಗಳು ಕೈ ಬಿಟ್ಟು ಹೋಗದಂತೆ ತಂತ್ರಗಾರಿಕೆ ರೂಪಿಸಲಾಗುತ್ತಿದೆ.
ಅಚ್ಚರಿಯ ಬೆಳವಣಿಗೆಯಲ್ಲಿ ಅತಿ ದೊಡ್ಡ ಸಹಕಾರಿ ಸಂಸ್ಥೆಯಾದ ಮ್ಯಾಮ್ಕೋಸ್ ಸಹ ತನ್ನ ಅತಿ ದೊಡ್ಡ ಠೇವಣಿಯನ್ನು ಡಿಸಿಸಿಬಿಯಿಂದ ಹಿಂತೆಗೆದುಕೊಳ್ಳಲು ಮುಂದಾಗಿತ್ತು. ಆದರೆ, ಮ್ಯಾಮ್ಕೋಸ್ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಯವರೇ ಖುದ್ದು ಆಸಕ್ತಿ ವಹಿಸಿ, ಠೇವಣಿ ಹಿಂತೆಗೆದುಕೊಳ್ಳದಂತೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ. ಡಿಸಿ ಅಧ್ಯಕ್ಷರಾಗಿವು ಸಂಸ್ಥೆಯೇ ಡಿಸಿಸಿಬಿಯಿಂದ ಠೇವಣಿ ಹಿಂಪಡೆದರೆ ಜನರಿಗೆ ತಪ್ಪು ಸಂದೇಶ ರವಾನೆ ಆದಂತಾಗುತ್ತದೆ. ಹೀಗಾಗಿ ತಕ್ಷಣಕ್ಕೆ ಠೇವಣಿ ಹಿಂಪಡೆಯುವುದು ಬೇಡ ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದ್ದಾರೆ ಎಂದು ಗೊತ್ತಾಗಿದೆ. ಇನ್ನೊಂದೆಡೆ ಜೈಲ್ ರಸ್ತೆಯ ಒಂದು ಸಹಕಾರ ಬ್ಯಾಂಕ್ ಸಹ ಡಿಸಿಸಿಬಿಯಲ್ಲಿ ಇರುವ ತನ್ನ ಠೇವಣಿ ಹಿಂತೆಗೆದುಕೊಳ್ಳಲು ಮುಂದಾಗಿತ್ತು. ಅದನ್ನು ಸಹಕಾರ ಇಲಾಖೆ ಅಧಿಕಾರಿಗಳು ತಡೆದಿದ್ದಾರೆ.
'ಕನ್ನಡಪ್ರಭ' ಪ್ರಮುಖ ಸಹಕಾರಿ ಸಂಸ್ಥೆಯೊಂದರ ಮುಖ್ಯಸ್ಥರನ್ನು ಈ ಬೆಳವಣಿಗೆಯ ಕುರಿತು ಪ್ರಶ್ನಿಸಿದಾಗ, ಡಿಸಿಸಿ ಬ್ಯಾಂಕಿನ ವ್ಯವಹಾರ ಅಷ್ಟಾಗಿ ಚೆನ್ನಾಗಿಲ್ಲ. ಆರ್ಥಿಕ ಪರಿಸ್ಥಿತಿ ನೆಟ್ಟಗಿಲ್ಲ, ಗುಟ್ಟುಗುಟ್ಟಾಗಿ ಏನೇನೋ ವ್ಯವಹಾರ ನಡೆದುಕೊಂಡು ಬರುತ್ತಿದೆ. ಹೀಗೆ ಆದರೆ ನಾವು ಇಟ್ಟ ಠೇವಣಿ ವಾಪಾಸು ಪಡೆಯುವುದು ಕಷ್ಟವಾಗಬಹುದು ಎಂದು ಮುಂದಾಲೋಚನೆಯಿಂದ ಹಣ ಹಿಂಪಡೆಯುವ ಪ್ರಯತ್ನ ಮಾಡಿದ್ದು ಹೌದು. ಒಂದು ವೇಳೆ ಡಿಸಿಸಿಬಿ ಹೆಚ್ಚು ಕಡಿಮೆಯಾದರೆ ನಮ್ಮ ಗ್ರಾಹಕರಿಗೆ ಏನು ಉತ್ತರ ಕೊಡುವುದು ಹೇಳಿ ಎಂದು ಮರು ಪ್ರಶ್ನೆ ಹಾಕಿದರು.
ಅನುಮಾನಾಸ್ಪದ ನಡೆ: ಕಳೆದ 4-5 ವರ್ಷದಿಂದಲೂ ಡಿಸಿಸಿಬಿಯಲ್ಲಿ ಕಣ್ಣಾಮುಚ್ಚಾಲೆ ವ್ಯವಹಾರ ನಡೆದಿದೆ. ಡಿಸಿಸಿಬಿಯ ವ್ಯವಹಾರವನ್ನು 64 'ಸಿ' ಯಡಿ ತನಿಖೆಗೊಳಪಡಿಸಲು ಸಕ್ಷಮ ಪ್ರಾಧಿಕಾರ ಮುಂದಾದಾಗ ಡಿಸಿಸಿಬಿ ಖುದ್ದು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದು ಅನೇಕ ಸಹಕಾರಿಗಳಿಗೆ ಸಹ್ಯ ಎನಿಸಿರಲಿಲ್ಲ ಎಂದು ಹಿರಿಯ ಸಹಕಾರಿ ಧುರೀಣರು ತಿಳಿಸಿದರು. ತನಿಖೆ ನಡೆಸಲು ತಡೆಯಾಜ್ಞೆ ಏಕೆ ತರಬೇಕಾಗಿತ್ತು. ಹೀಗೆ ತಡೆಯಾಜ್ಞೆ ತರುವ ಮೂಲಕ ಜಿಲ್ಲೆಯ ಸಹಕಾರಿ ಸಂಸ್ಥೆಗೆ ಡಿಸಿಸಿಬಿ ಆಡಳಿತ ಮಂಡಳಿಯೇ ಅನುಮಾನದ ಬೀಜ ಬಿತ್ತಿದಂತಾಯಿತು ಎಂದರು.
ಇನ್ನೊಂದೆಡೆ ಸದ್ಯ ವಿಚಾರಣೆಯಲ್ಲಿರುವ ಡಿಸಿಸಿಬಿ ವಾಹನ ಚಾಲಕರೊಬ್ಬರು ಶಿವಮೊಗ್ಗ ಪುಡಿ ರೌಡಿ ಗಿರಿ ಎಂಬಾತನಿಂದ ಡಿಸಿಸಿಬಿ ಆಡಿಟ್ ಮಾಡಿದ ಸಿಬ್ಬಂದಿಗೆ ಬೆದರಿಕೆ ಹಾಕಿಸಿದ ಪ್ರಸಂಗ ಗೌಪ್ಯವಾಗೇನು ಉಳಿದಿಲ್ಲ. ಈ ಪ್ರಕರಣದ ಹಿಂದೆ ಡಿಸಿಸಿಬಿಯ ಯಾರ್ಯಾರಿದ್ದರು ಎಂಬುದು ಗೊತ್ತಾಗಿಲ್ಲ. ಆದರೆ, ಲೆಕ್ಕಪತ್ರದ ವಿಚಾರದಲ್ಲಿ ರೌಡಿ ಪ್ರವೇಶವಾಗಿದ್ದೂ ಡಿಸಿಸಿಬಿ ಘನತೆಯನ್ನು ಕುಂದಿಸಿತ್ತು.
ಒಂದೆಡೆ ಡಿಸಿಸಿಬಿಯ ನೈಜ ಬಂಡವಾಳ ಸೋಮವಾರದಿಂದ ಗೊತ್ತಾಗಲಿದೆ. ಜನರು ಎಷ್ಟು ಪ್ರಮಾಣದಲ್ಲಿ ತಮ್ಮ ಠೇವಣಿ ಹಿಂತೆಗೆದುಕೊಳ್ಳುತ್ತಾರೆಂಬುದರ ಮೇಲೆ ಭವಿಷ್ಯ ಅಡಗಿದೆ. ಶನಿವಾರವೇ ಸಾಕಷ್ಟು ಸಹಕಾರ ಸಂಸ್ಥೆಗಳಿಂದ ಗ್ರಾಹಕರು ತಮ್ಮ ಠೇವಣಿ ಹಿಂದಕ್ಕೆ ಪಡೆದಿದ್ದಾರೆ.
ಗುಮ್ಮನಂತಿದ್ದ ಆಡಳಿತ ಮಂಡಳಿ
ಡಿಸಿಸಿಬಿಯಲ್ಲಿ ಅಡಮಾನ ಅವ್ಯವಹಾರ 4 ವರ್ಷದಿಂದಲೂ ನಡೆದಿದೆ. ಈ ವಿಚಾರ ಡಿಸಿಸಿಬಿ ಆಡಳಿತ ಮಂಡಳಿಗೆ ಈವರೆಗೆ ಗೊತ್ತಾಗಿಲ್ಲ ಎಂಬ ಮಾತು ನಂಬಿಕೆಗೆ ಅರ್ಹವಲ್ಲ. ಆಡಳಿತ ಮಂಡಳಿಗೆ ಗೊತ್ತಿದ್ದೇ ಅವ್ಯವಹಾರ ನಡೆದಿದೆ, ಹಾಗೆಯೇ ಒಬ್ಬ ಹೆಣ್ಣು ಮಗಳು ಇಷ್ಟೊಂದು ದೊಡ್ಡ ಹಗರಣಕ್ಕೆ ಕೈ ಹಾಕಲು ಸಾಧ್ಯವೇ ಇಲ್ಲ. ಈಕೆಯ ಹಿಂದಿನ ಬಲವಾದ ಶಕ್ತಿ ಯಾರೆಂಬುದು ಸದ್ಯದಲ್ಲಿಯೇ ಬಹಿರಂಗವಾಗಲಿದೆ. ಅವ್ಯವಹಾರದಲ್ಲಿ ಕಂಡುಬಂದ ಹಣ ಆಸ್ತಿ ಖರೀದಿ, ಆನ್‌ಲೈನ್ ಬಿಡ್ಡಿಂಗ್‌ಗಷ್ಟೇ ಬಳಕೆ ಆಯಿತೇ ಅಥವಾ ಚುನಾವಣೆಗೂ ಬಳಕೆ ಆಯಿತೆ ಎಂಬುದು ಸದ್ಯದಲ್ಲಿ ತನಿಖೆಯಿಂದ ಬಹಿರಂಗವಾಗುತ್ತದೆ ಎಂದು ಜಿಲ್ಲೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.