ದಾಕ್ಷಿಣಾಂತ್ಯ ಅಭಿನಯ ಸಿದ್ಧಾಂತ ಕೃತಿ ಬಿಡುಗಡೆ
ಸಾಗರ: ಇಲ್ಲಿನ ಲಾಲ್ ಬಹದ್ದೂರ್ ಕಾಲೇಜಿನ ನಿವೃತ್ತ ಪ್ರಾಚಾರ್ಯ, ರಂಗಕರ್ಮಿ ಡಾ. ಗುರುರಾವ್ ಬಾಪಟ್ ಅವರ 'ದಾಕ್ಷಿಣಾಂತ್ಯ ಅಭಿನಯ ಸಿದ್ಧಾಂತ' ಎಂಬ ಇಂಗ್ಲಿಷ್ ಭಾಷೆಯಲ್ಲಿರುವ ಕೃತಿಯನ್ನು ಗೋಟಗೋಡಿನ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನದ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು.
ಸಂಸ್ಥಾಪನೆಯ ಸವಿನೆನೆಪಿಗಾಗಿ 15 ಕೃತಿಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಜಿ. ಸಿದ್ದರಾಮಯ್ಯ ಲೋಕಾರ್ಪಣೆ ಮಾಡಿದರು. ಜಾನಪದ ಜಗಲಿಯ ಗೌರವ ಸಂಪಾದಕ ಬೈರಮಂಗಲ ರಾಮೇಗೌಡ ಪುಸ್ತಕಗಳ ಕುರಿತು ಮಾತನಾಡಿದರು. ಬೆಂಗಳೂರು ವಿವಿಯ ನಿವೃತ್ತ ಪ್ರಾಧ್ಯಾಪಕ ಎಚ್.ಎಸ್. ಈಶ್ವರ್, ಸ್ವ್ಯಾನ್ ಪ್ರಿಂಟರ್ಸ್ನ ಕೃಷ್ಣಮೂರ್ತಿ ಅತಿಥಿಗಳಾಗಿ ಭಾಗವಹಿಸಿದ್ದರು. ವಿವಿಯ ಕುಲಪತಿ ಡಾ. ಅಂಬಳಕೆ ಹಿರಿಯಣ್ಣ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ಡಾ. ಗುರುರಾವ್ ಬಾಪಟ್, ಮಾಧುರಿ ಬಾಪಟ್, ಸಾಹಿತಿ ವಿಲಿಯಂ ಇದ್ದರು.