ಸುಣ್ಣದಕೊಪ್ಪ ವೈದ್ಯಾಧಿಕಾರಿ ಡಾ. ಅಶೋಕ್ಗೆ ಬೀಳ್ಕೊಡುಗೆ
ಶಿರಾಳಕೊಪ್ಪ: ಸಮೀಪದ ಸುಣ್ಣದಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಶೋಕ ಉನ್ನತ ವ್ಯಾಸಂಗಕ್ಕಾಗಿ ತೆರಳುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
ಆರು ವರ್ಷಕ್ಕೂ ಹೆಚ್ಚು ಕಾಲ ಪಟ್ಟಣದಲ್ಲಿ ಸೇವೆ ಸಲ್ಲಿಸಿದ ಅವರು ಆರೋಗ್ಯ ಕೇಂದ್ರದ ಸಿಬ್ಬಂದಿ ಮತ್ತು ಆ ಭಾಗದ ಗ್ರಾಮಸ್ಥರ ಮನಸ್ಸನ್ನು ಗೆದ್ದಿದ್ದು, ಎಲ್ಲರಿಗೂ ಆತ್ಮೀಯರಾಗಿದ್ದರು. ಸನ್ಮಾನ ಸ್ವೀಕರಿಸಿದ ಡಾ.ಅಶೋಕ ಮಾತನಾಡಿ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಿದ ತೃಪ್ತಿ ನನಗಿದೆ. ಈ ಭಾಗದ ಗ್ರಾಮಸ್ಥರು ನನ್ನ ಮೇಲೆ ಇಟ್ಟ ವಿಶ್ವಾಸ, ತೋರಿದ ಗೌರವಕ್ಕೆ ನಾನು ಋಣಿ ಎಂದ ಅವರು, ಸಾರ್ವಜನಿಕರ ಇನ್ನೂ ಹೆಚ್ಚಿನ ಸೇವೆಮಾಡಲು ಉನ್ನತ ವ್ಯಾಸಂಗಕ್ಕೆ ತೆರಳುತ್ತಿದ್ದೇನೆ ಎಂದು ತಿಳಿಸಿದರು. ಆರೋಗ್ಯ ಕೇಂದ್ರದ ಸಿಬ್ಬಂದಿ ಡಾ. ಅಶೋಕ ಅವರಿಗೆ ನಿಮ್ಮ ಕನಸು ಈಡೇರಲಿ ಮತ್ತು ನಿಮ್ಮ ಮುಂದಿನ ಜೀವನ ಸುಖಕರವಾಗಲಿ ಎಂದು ಹಾರೈಸಿದರು.
ಎಂಪಿಎಂ ಸಂಘದ ಚುನಾವಣೆ: ಇಂದು ಕೋರ್ಟ್ ವಿಚಾರಣೆ
ಭದ್ರಾವತಿ: ಎಂಪಿಎಂ ಉದ್ಯೋಗಿಗಳ ಸಂಘದ ಮೂರು ವರ್ಷದ ಅವಧಿ ಮುಗಿದಿದ್ದು, ಕಾರ್ಯಕಾರಿ ಸಮಿತಿ ನಿರ್ಣಯ ಪ್ರಕಾರ ಚುನಾವಣಾಧಿಕಾರಿಯನ್ನು ನೇಮಿಸಿ ಆ.17ರಂದು ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಚುನಾವಣೆ ಘೋಷಿಸಿ ಆಗಿತ್ತು. ಆದರೆ ಸಂಘದ ನಾಲ್ವರು ಪದಾಧಿಕಾರಿಗಳು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದರಿಂದ ಚುನಾವಣಾ ಪ್ರಕ್ರಿಯೆಗೆ ಅಡ್ಡಿ ಉಂಟಾಗಿತ್ತು. ಆದ್ದರಿಂದ ಜು.23ರಂದು ಕಾರ್ಯಕಾರಿ ಸಮಿತಿ ತುರ್ತು ಸಭೆ ನಡೆಸಿ ತಡೆಯಾಜ್ಞೆ ತೆರವುಗೊಳಿಸಬೇಕೆಂಬ ನಿರ್ಣಯ ತೆಗೆದುಕೊಂಡ ಮೇರೆಗೆ ಜು.24ರಂದು ಸಂಘದ ಅಧ್ಯಕ್ಷ ಚಂದ್ರಶೇಖರ್ ಹಾಗೂ ವಕೀಲ ಟಿ.ಚಂದ್ರೇಗೌಡ ವಕಾಲತು ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಇದರ ವಿಚಾರಣೆ ಸೋಮವಾರ ನಡೆಯಲಿದೆ ಎಂದು ಎಂಪಿಎಂ ಉದ್ಯೋಗಿಗಳ ಸಂಘ ತಿಳಿಸಿದೆ.