ಮನೆ ಮನೆಗೆ ತೆರಳಿ ಮತ ಯಾಚನೆ
ಶಿಕಾರಿಪುರ: ತಾಲೂಕಿನ ಸಂಪೂರ್ಣ ಅಭಿವೃದ್ಧಿಯೊಂದಿಗೆ ಜನಸಾಮಾನ್ಯರ ಕಷ್ಟಕ್ಕೆ ಪಕ್ಷ ಸ್ಪಂದಿಸಿದ ಕಾರಣಕ್ಕಾಗಿ ತಾಲೂಕಿನ ಮತದಾರರು ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅತೀ ಹೆಚ್ಚು ಮತ ಗಳಿಸಲು ಕಾರಣಕರ್ತರಾಗಿದ್ದಾರೆ ಎಂದು ಮಾಜಿ ಸಂಸದ ಬಿಜೆಪಿ ಅಭ್ಯರ್ಥಿ ರಾಘವೇಂದ್ರ ಹೇಳಿದರು.
ಸೋಮವಾರ ತಾಲೂಕಿನ ಮಾರವಳ್ಳಿ ಗ್ರಾಮದಲ್ಲಿ ಮನೆ ಮನೆಗೆ ತೆರಳಿ ಮತ ಯಾಚನೆ ನಂತರದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಪ್ರಚಾರಕ್ಕಾಗಿ ಕೃಷಿಕರನ್ನು ಸಭೆಗೆ ಕರೆತಂದು ಕೃಷಿ ಕಾರ್ಯಕ್ಕೆ ಹಿನ್ನಡೆಯಾಗದಿರಲು ಅವರಿದ್ದಲ್ಲಿಗೇ ಹೋಗಿ ಮತ ಯಾಚನೆ ಮಾಡಲಾಗಿದೆ ಎಂದರು. ಅಪೂರ್ಣಗೊಂಡಿರುವ ಕೆಲ ಕಾಮಗಾರಿಗಳಿಗೆ ಇದೀಗ ಸರ್ಕಾರ ಹಣ ಬಿಡುಗಡೆಗೊಳಿಸದೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ತಾಲೂಕಿನ ಪ್ರತಿ ಗ್ರಾಮಗಳಿಗೆ ಕುಡಿಯುವ ನೀರು, ರಸ್ತೆ, ಚರಂಡಿ ಸಹಿತ ಅತ್ಯಗತ್ಯವಾದ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಈ ದಿಸೆಯಲ್ಲಿ ವಿರೋಧಿ ಕಾರ್ಯಕರ್ತರು ಅಭಿವೃದ್ಧಿ ಕಾಮಗಾರಿಯ ಬಗ್ಗೆ ಮೆಚ್ಚುವ ವ್ಯಕ್ತಪಡಿಸುತ್ತಿದ್ದು ಅವರ ಬಳಿ ಮತಯಾಚನೆ ಮಾಡಿ ಬೆಂಬಲಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡ ಚನ್ನವೀರಪ್ಪ, ರಮೇಶ್ ನಾಯ್ಕ, ಸುರೇಶ್ ನಾಯ್ಕ, ಸಿದ್ದಲಿಂಗಪ್ಪ, ನಿಂಗಪ್ಪ, ಅಶೋಕ್, ಚಂದ್ರೇಗೌಡ, ರಾಘವೇಂದ್ರ ಮತ್ತಿತರರು ಹಾಜರಿದ್ದರು.