ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ರಸ್ತೆಯಲ್ಲಿ ಬತ್ತದ ಸಸಿ ನೆಟ್ಟು ವಿನೂತನ ಪ್ರತಿಭಟನೆ

Rashmi Kasaragodu
Updated On : 29 Jul 2014, 10:40 am

ಕ.ಪ್ರ. ವಾರ್ತೆ, ಸಾಗರ, ಜುಲೈ 28
ತಾಲೂಕಿನ ಸಿರಿವಂತೆ ಗ್ರಾಪಂ ವ್ಯಾಪ್ತಿಯ ಸಿರಿವಂತೆ-ಜನ್ನೆಹಕ್ಲು-ಬರದವಳ್ಳಿ ರಸ್ತೆ ಕೆಸರು ಹೊಂಡವಾಗಿ ಪರಿವರ್ತಿತವಾಗಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ ಎಂದು ದೂರಿರುವ ಗ್ರಾಮಸ್ಥರು ಸೋಮವಾರ ಈ ರಸ್ತೆಯಲ್ಲಿ ಬತ್ತದ ಸಸಿ ನೆಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಸಂತೋಷ್ ಲಂಡಿಗೆರೆ, ಮೂರು ತಿಂಗಳ ಹಿಂದೆ ಈ ರಸ್ತೆಯನ್ನು ನಿರ್ಮಾಣ ಮಾಡಿದ್ದು, ಕಳಪೆ ಕಾಮಗಾರಿಯಿಂದಾಗಿ ಮಳೆಗಾಲ ಆರಂಭದಲ್ಲಿಯೇ ರಸ್ತೆ ಪೂರ್ಣ ಹಾಳಾಗಿದೆ. ಈ ಭಾಗದಿಂದ ವಿದ್ಯಾರ್ಥಿಗಳು ಸಿರಿವಂತೆ ಶಾಲೆಗೆ ಬರುತ್ತಿದ್ದು, ರಸ್ತೆಯಲ್ಲಿ ಬರುವಾಗ ಮಕ್ಕಳ ಬಟ್ಟೆಯೆಲ್ಲಾ ಮಣ್ಣಾಗಿ ಅದೇ ಸ್ಥಿತಿಯಲ್ಲಿಯೇ ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ತಾಲೂಕು ಪಂಚಾಯ್ತಿ ಅನುದಾನದಲ್ಲಿ ರಸ್ತೆ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ನಿರ್ವಹಿಸಿದ್ದಲ್ಲದೇ, ರಸ್ತೆಗೆ ಬರೀ ಮಣ್ಣನ್ನು ತುಂಬಲಾಗಿದೆ. ಈಗ ಸತತ ಮಳೆ ಹಿನ್ನೆಲೆಯಲ್ಲಿ ರಸ್ತೆ ಮಣ್ಣು ಕೆಸರಿನ ಹೊಂಡವಾಗಿದೆ.   ಕಾಮಗಾರಿ ನಿರ್ವಹಿಸಿದ ಇಂಜಿನಿಯರ್ ಭರತ್‌ಗೆ ಈ ಬಗ್ಗೆ ತಿಳಿಸಿದ್ದರೂ ಅವರು ಈ ತನಕ ರಸ್ತೆ ದುರಸ್ತಿ  ಕೈಗೊಂಡಿಲ್ಲ ಎಂದು ಆರೋಪಿಸಿದರು.
ಸಾರ್ವಜನಿಕರು, ವಿದ್ಯಾರ್ಥಿಗಳ ಓಡಾಟ ಹಾಗೂ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು ಸಹ ರಸ್ತೆ ಹಾಳಾಗಿದ್ದು ಗೊತ್ತಿದ್ದರೂ, ಗೊತ್ತಿಲ್ಲದಂತೆ ಮೌನವಹಿಸಿರುವುದು ಖಂಡನೀಯ. ಇನ್ನಾದರೂ ರಸ್ತೆ ಪುನರ್ ನಿರ್ಮಾಣ ಸರಿಯಾಗಿ ಮಾಡದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಪ್ರಶಾಂತ್ ಲಂಡಿಗೆರೆ, ಅಶೋಕ, ಹುಚ್ಚಪ್ಪ, ಸುರೇಂದ್ರ, ಕನ್ನಮ್ಮ, ಗಂಗಮ್ಮ, ಲಕ್ಷ್ಮಮ್ಮ, ಚಂದ್ರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement