ಸೈನಿಕರ ಶೌರ್ಯ, ಸಾಹಸ ಸ್ಮರಣೆ ಅತ್ಯಗತ್ಯ
ಭದ್ರಾವತಿ: 15 ವರ್ಷಗಳ ಹಿಂದೆ ನಡೆದ ಕಾರ್ಗಿಲ್ ಯುದ್ಧದಲ್ಲಿ ಪಾಕಿಗಳಿಗೆ ತಕ್ಕ ಉತ್ತರ ನೀಡಿದ ನಮ್ಮ ದೇಶದ ವೀರಸೈನಿಕರ ಶೌರ್ಯ ಸಾಹಸವನ್ನು ದೇಶದ ಪ್ರತಿಯೊಬ್ಬ ಪ್ರಜೆಯೂ ಸ್ಮರಿಸಬೇಕೆಂದು ಆರ್.ಎಸ್.ಎಸ್ ಜಿಲ್ಲಾ ಸಹ ಸಂಪರ್ಕ ಪ್ರಮುಖ್ ಧರ್ಮಪ್ರಸಾದ್ ಹೇಳಿದರು.
ಅವರು ಸಮೀಪದ ಭದ್ರಾಕಾಲೋನಿಯ ಕಣಕಟ್ಟೆಯಲ್ಲಿ ಕಾರ್ಗಿಲ್ ಯುವಕರ ಸಂಘ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಕಾರ್ಗಿಲ್ ಹುತಾತ್ಮರ ದಿನಾಚರಣೆಯಲ್ಲಿ ಪ್ರಮುಖ ಭಾಷಣಕಾರರಾಗಿ ಮಾತನಾಡಿದರು. ಸ್ವಾತಂತ್ರ್ಯಾನಂತರ ಪಾಕಿಸ್ತಾನ ಪದೇಪದೇ ದೇಶವನ್ನು ಕೆಣಕಿ ಭಾರತದ ಅಖಂಡತೆ, ಭದ್ರತೆ ಮತ್ತು ಸಾರ್ವಭೌಮತೆಯ ಮೇಲೆ ನಿರಂತರವಾಗಿ ದಾಳಿ ನಡೆಸಿ ಸದಾ ಸೋಲನ್ನು ಕಂಡಿದೆ. ಆದರೂ ಪಾಠ ಕಲಿಯದ ಪಾಕ್ 1999ರಲ್ಲಿ ಭಾರತದ ಕಾರ್ಗಿಲ್ನಲ್ಲಿ ಗುಪ್ತನೆಲೆ ಮಾಡಿಕೊಂಡು ವಶಪಡಿಸಿಕೊಳ್ಳಲು ಯತ್ನಿಸಿತ್ತು. ಆದರೆ ಭಾರತೀಯ ಸೈನಿಕರು ಪಾಕಿಸ್ತಾನದ ಒಳಸಂಚನ್ನು ಯಶಸ್ವಿಯಾಗಿ ಭೇದಿಸಿ ದಿಟ್ಟ ಕಾರ್ಯಾಚರಣೆ ಮೂಲಕ ಆ ಭೂಭಾಗ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಈ ಯುದ್ಧದಲ್ಲಿ ಭಾರತದ 527 ವೀರಯೋಧರು ತಮ್ಮ ಪ್ರಾಣತ್ಯಾಗ ಮಾಡಿದರು ಎಂದು ಧರ್ಮಪ್ರಸಾದ್ ಹೇಳಿದರು.
ಧರ್ಮರಾಜ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಗರಸಭಾ ಸದಸ್ಯ ಎಂ.ಎ.ಅಜಿತ್, ಎಚ್.ಆನಂದ್, ಬಿಜೆಪಿ ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಕೆ.ಎಸ್.ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿದ್ದರು. ಮಾಜಿ ಯೋಧ ಗಿರಿಯಪ್ಪ, ಆನಂದಪ್ಪ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮುಖ್ಯೋಪಾಧ್ಯಾಯಿನಿ ಪುಟ್ಟಲಕ್ಷ್ಮಮ್ಮ, ಬಿ.ಟಿ.ಗುರುಲಿಂಗಪ್ಪ, ಸುಬ್ರಮಣಿ ವೇದಿಕೆಯಲ್ಲಿದ್ದರು. ಚುಂಚಲಕ್ಷ್ಮಿ ಪ್ರಾರ್ಥಿಸಿದರು.