ಆಮ್ ಆದ್ಮಿಯಿಂದ ಚಂದ್ರಕಾಂತ್ ಕಣಕ್ಕೆ
ಶಿಕಾರಿಪುರ: ಇಲ್ಲಿನ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಆಮ್ ಆದ್ಮಿ ಪಕ್ಷದಿಂದ ತಾಲೂಕು ಸಂಚಾಲಕ ಚಂದ್ರಕಾಂತ್ ರೇವಣಕರ್ ಸ್ಪರ್ಧಿಸಲು ಪಕ್ಷದ ತಾಲೂಕು ಸಮಿತಿ ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ.
ಪಟ್ಟಣದಲ್ಲಿನ ಪಕ್ಷದ ಕಚೇರಿಯಲ್ಲಿ ಈ ಬಗ್ಗೆ ಸಭೆ ನಡೆಸಿದ ಸದಸ್ಯರು, ಪಕ್ಷಕ್ಕೆ ಎಲ್ಲ ವರ್ಗದ ಬೆಂಬಲ ಗಳಿಸಲು ಚಂದ್ರಕಾಂತ್ ಮೂಲಕ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಸರ್ವ ಸಮ್ಮತ ಅಭ್ಯರ್ಥಿಯಾಗಿ ಚಂದ್ರಕಾಂತ್ ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಯಿತು. ಆಯ್ಕೆಯನ್ನು ಸಹ ಸಂಚಾಲಕ ಪ್ರಕಾಶ್ ಕೋನಾಪುರ ಅನುಮೋದಿಸಿದರು. ಜಿಲ್ಲಾ ಸಂಚಾಲಕ ಚಂದ್ರಶೇಖರ್, ದನಂಜಯ, ತಾ.ಘಟಕದ ಖಜಾಂಚಿ ಪ್ರಕಾಶ್ ಬೇಗೂರು, ಮಂಜಣ್ಣ ಗೌಡರ್, ನಾಗಪ್ಪ, ಸಾಗರ ಘಟಕದ ಸಂಚಾಲಕ ವಸಂತ್ ಕುಮಾರ್, ಸುರೇಶ್ ರೌಟೇಕರ್, ಶಿವಮೊಗ್ಗದ ಸುರೇಶ್ ವಾಟಗೋಡು, ಸೊರಬದ ಜಿ. ಬಂಗಾರಪ್ಪ ಮತ್ತಿತರರು ಹಾಜರಿದ್ದರು.