ನೀತಿ ಸಂಹಿತೆ ಕಾರಣಕಾರ್ಯಕ್ರಮ ರದ್ದು
ಸಾಗರ: ಚುನಾವಣೆ ನೀತಿ ಸಂಹಿತೆ ಹಾಗೂ ಮಳೆಗಾಲದ ಹಿನ್ನೆಲೆಯಲ್ಲಿ ಆ.15ರಂದು ನಡೆಯಲಿರುವ ಸ್ವಾತಂತ್ರ್ಯ ದಿನಾಚರಣೆಯ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ರದ್ದು ಮಾಡಲಾಗಿದ್ದು, ಮುಂದಿನ ಕನ್ನಡ ರಾಜ್ಯೋತ್ಸವ ಹಾಗೂ ಗಣರಾಜ್ಯೋತ್ಸವ ದಿನದಂದು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಉಪವಿಭಾಗಾಧಿಕಾರಿಗಳು ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷರಾದ ಡಾ. ಉದಯಕುಮಾರ್ ಶೆಟ್ಟಿ ಹೇಳಿದರು.
ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದು ಪೂರ್ವಭಾವಿ ಸಭೆಯಲ್ಲಿ, ರಾಷ್ಟ್ರೀಯ ಹಬ್ಬಗಳ ಸಂದರ್ಭದಲ್ಲಿ ಪ್ಲಾಸ್ಟಿಕ್ ಧ್ವಜ ಬಳಕೆ ಮಾಡಬಾರದು ಎಂದು ಹಿಂದೆಯೇ ಸೂಚನೆ ನೀಡಲಾಗಿದೆ ಎಂದರು.
ಪಟ್ಟಣವ್ಯಾಪ್ತಿಯಲ್ಲಿ ಯಾವುದೆ ಅಂಗಡಿಗಳಲ್ಲೂ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡದಂತೆ ನಿಷೇದ ಹೇರಲಾಗಿದೆ.
ನಗರಸಭೆ ಅಧಿಕಾರಿಗಳು ಸಹ ಈ ಬಗ್ಗೆ ನಿಗಾ ವಹಿಸಿದ್ದಾರೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪ್ಲಾಸ್ಟಿಕ್ ಧ್ವಜ ಬಳಕೆ ಮಾಡಬಾರದು ಎಂದು ತಿಳಿಸಿದರು.
ನಗರಸಭೆ ಅಧ್ಯಕ್ಷೆ ಎನ್. ಲಲಿತಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ್ ಸಿಂಗ್, ಪೇಟೆಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಕೃಷ್ಣಮೂರ್ತಿ, ತಾಲೂಕು ಆರೋಗ್ಯಾಧಿಕಾರಿ ಡಾ. ಕೆ.ಪಿ. ಅಚ್ಚುತ್, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ. ಸ್ವಾಮಿ ಇನ್ನಿತರರು ಹಾಜರಿದ್ದರು.
ಕೆರೆಮನೆ ಹಿನ್ನೀರಿನಲ್ಲಿ ಯುವಕನ ಶವ ಪತ್ತೆ
ಹೊಸನಗರ: ತಾಲೂಕಿನ ಕರಿಮನೆ ವ್ಯಾಪ್ತಿಯ ಹಿನ್ನೀರಲ್ಲಿ ಕುಮಟಾ ಮೂಲದ ಜೀವನ್ ಎಂಬಾತನ ಶವ ಮಂಗಳವಾರ ಮಧ್ಯಾಹ್ನ ಪತ್ತೆಯಾಗಿದೆ.
ಇತ್ತೀಚಿಗೆ ಕರಿಮನೆ ಸ್ನೇಹಿತನ ಮನೆಗೆ ಬಂದಿದ್ದ ಜೀವನ್ ಸೋಮವಾರ ಮಧ್ಯಾಹ್ನ ಮೀನು ಹಿಡಿಯಲು ಹಿನ್ನೀರಿಗೆ ತೆರಳಿದ್ದು, ಆಕಸ್ಮಿಕವಾಗಿ ಬಿದ್ದು ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ. ನಗರ ಪಿಎಸ್ಐ ಸತೀಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿಗಳು ತನಿಖೆಯಿಂದ ಲಭ್ಯವಾಗಬೇಕಿದೆ.
ಬೆಂಗಳೂರು ಚಲೋ ಸರ್ಕಾರಕ್ಕೆ ಮನವಿ
ಭದ್ರಾವತಿ: ಎಐಟಿಯುಸಿ ನೇತೃತ್ವದಲ್ಲಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇತ್ತೀಚೆಗೆ ಬೆಂಗಳೂರು ಚಲೋ ಹೋರಾಟ ನಡೆಸಿದರು.
ಫ್ರೀಡಂ ಪಾರ್ಕಿನಲ್ಲಿ ಮುಷ್ಕರ ನಡೆಸುವ ಸಂದರ್ಭ ಅಲ್ಲಿಗೆ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಅವರಿಗೆ ಮನವಿ ಅರ್ಪಿಸಲಾಯಿತು ಎಂದು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ರಾಜ್ಯ ಉಪಾಧ್ಯಕ್ಷೆ ಸುಶೀಲಾಬಾಯಿ ತಿಳಿಸಿದ್ದಾರೆ.