ಶಿರಾಳಕೊಪ್ಪದಲ್ಲಿ ರಂಜಾನ್ ಸಂಭ್ರಮಕ್ಕೆ ಮಳೆ ಅಡ್ಡಿ
ಶಿರಾಳಕೊಪ್ಪ: ಮುಸ್ಸಿಂ ಬಾಂಧವರ ಸಂಭ್ರಮದ ರಂಜಾನ್ ಆಚರಣೆಗೆ ಪಟ್ಟಣದಲ್ಲಿ ಮಂಗಳವಾರ ಧಾರಾಕಾರ ಮಳೆ ಸುರಿದು ಅಡ್ಡಿಪಡಿಸಿತು.
ಪ್ರತಿ ಬಾರಿಯ ರಂಜಾನ್ ಸಂದರ್ಭ ಮುಸಲ್ಮಾನರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ನಂತರ ಸಾಮೂಹಿಕವಾಗಿ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿ, ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಮಳೆ ಆ ಆಚರಣೆಗೆ ತಣ್ಣೀರೆರಚಿತು. ಮಳೆಯಿಂದಾಗಿ ಪ್ರಾರ್ಥನೆ ಮಾಡುವ ಸ್ಥಳದಲ್ಲಿ ನೀರು ನಿಂತ ಕಾರಣ ಪಟ್ಟಣದ ಮಸೀದಿಗಳಲ್ಲಿಯೇ ಸಾಮೂಹಿಕ ಪ್ರಾರ್ಥನೆ ನಡೆಸಲಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.