ವೈದ್ಯರ ಬರದ ನಡುವೆ ಹುದ್ದೆಗೆ ಕತ್ತರಿ
ಶಿವಮೊಗ್ಗ: ಸರ್ಕಾರಿ ಕನ್ನಡ ಶಾಲೆಗೆ ಬೀಗ ಜಡಿಯುತ್ತಿರುವ ಸಂದರ್ಭದಲ್ಲೇ ಸರ್ಕಾರಿ ಆಸ್ಪತ್ರೆಗೆ ವೈದ್ಯರಿಲ್ಲದೇ ಬೀಗ ಜಡಿಯುವ ದಿನಗಳು ದೂರವಿಲ್ಲ.
ಕಾರಣವಿಷ್ಟೆ, ಐಪಿಎಚ್‌ಎಸ್ 2012 (ಭಾರತೀಯ ಸಾರ್ವಜನಿಕ ಆರೋಗ್ಯ ಮಟ್ಟ) ನಿಯಮಾವಳಿ ಉಲ್ಲಂಘಿಸಿ ರಾಜ್ಯದ ಆರೋಗ್ಯ ಇಲಾಖೆಯು ಸಮುದಾಯ ಆರೋಗ್ಯ ಕೇಂದ್ರ, ತಾಲೂಕುಮಟ್ಟದ ಆಸ್ಪತ್ರೆ, ಜಿಲ್ಲಾಮಟ್ಟದ ಆಸ್ಪತ್ರೆಗಳಲ್ಲಿನ ವೈದ್ಯರ ಹುದ್ದೆಗಳನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ.
ಅಚ್ಚರಿ ಎಂದರೆ ದಿನದ 24 ಗಂಟೆ ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ನೀಡುವ ಆರೋಗ್ಯ ಕೇಂದ್ರಗಳಿಗೂ ವೈದ್ಯರು, ವಿವಿಧ ವೃಂದದ ಸಿಬ್ಬಂದಿ ಕಡಿತಗೊಳಿಸುವ ಮೂಲಕ ಸಾರ್ವಜನಿಕ ಆರೋಗ್ಯ ಸೇವೆಯ ಮೇಲೆ ಗಂಭೀರ ಪರಿಣಾಮ ಬೀರುವ ನಿರ್ಧಾರ ಕೈಗೊಂಡಿದೆ.
ನಿಯಮಾವಳಿ ಹೇಳೋದೇನು?: ಐಪಿಎಚ್‌ಎಸ್ 2012 ನಿಯಮವಾಳಿ ಪ್ರಕಾರ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಬ್ಬರು ವೈದ್ಯರಿರಬೇಕು. 24 ಗಂಟೆ ಕೆಲಸ ಮಾಡುವ ಆರೋಗ್ಯ ಕೇಂದ್ರಕ್ಕೆ 3 ವೈದ್ಯರು ಪಾಳಿ ಮೇಲೆ ಕಾರ್ಯನಿರ್ವಹಿಸಬೇಕು. ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್‌ಸಿ) ಅಂದರೆ 30 ಹಾಸಿಗೆಗಳ ಆಸ್ಪತ್ರೆಗೆ ಐದು ವೈದ್ಯರು ಇರಬೇಕು.
31 ರಿಂದ 50 ಹಾಸಿಗೆಗಳಿರುವ ತಾಲೂಕುಮಟ್ಟದ ಆಸ್ಪತ್ರೆಗೆ 3 ಸ್ಪೆಷಲಿಸ್ಟ್ ಗಳಿರಬೇಕು. 7 ಸಾಮಾನ್ಯ ಕರ್ತವ್ಯ ನಿರತ ವೈದ್ಯರು, ಅದರಲ್ಲಿ ಕಡ್ಡಾಯವಾಗಿ 3 ಜನ ಮಹಿಳಾ ವೈದ್ಯರು ಇರಬೇಕು. 51 ರಿಂದ 100 ಹಾಸಿಗೆ ಇರುವ ತಾಲೂಕುಮಟ್ಟದ ಆಸ್ಪತ್ರೆಗಳಿಗೆ 19 ಸ್ಪೆಷಲಿಸ್ಟ್ ವೈದ್ಯರು ಹಾಗೂ ಒಬ್ಬ ಆಯುಷ್ ವೈದ್ಯರು, 11 ಸಾಮಾನ್ಯ ಕರ್ತವ್ಯನಿರತ ವೈದ್ಯರು, ಅದರಲ್ಲಿ ಕಡ್ಡಾಯವಾಗಿ 4 ಮಹಿಳಾ ವೈದ್ಯರು ಇರಬೇಕು.
ಆದರೆ, ರಾಜ್ಯದಲ್ಲಿ ನಿಯಮಾವಳಿಯಷ್ಟು ವೈದ್ಯರು ಸೇವೆಯಲ್ಲಿಲ್ಲ. 24 ಗಂಟೆಯೂ ಕಾರ್ಯನಿರ್ವಹಿಸುವ ಅನೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಒಬ್ಬಿಬ್ಬರು ವೈದ್ಯರಿದ್ದಾರೆ. ಸಂಬಳ, ಭತ್ಯೆ ಕಡಿಮೆ ಇರುವುದು, ವಸತಿ ಸಮಸ್ಯೆ ಸೇರಿದಂತೆ ಹತ್ತಾರು ಸಮಸ್ಯೆಗಳು ವೈದ್ಯರ ಕೊರತೆಗೆ ಕಾರಣ.
ಪರಿಸ್ಥಿತಿ ಹೀಗಿರುವಾಗ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯು ಜಿಲ್ಲಾ ಆಸ್ಪತ್ರೆ, ಸಾರ್ವಜನಿಕ ಆಸ್ಪತ್ರೆ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ವಿವಿಧ ವೃಂದಗಳ ಹುದ್ದೆಗಳನ್ನು ಕಡಿತಗೊಳಿಸಿ ಆದೇಶ ಹೊರಡಿಸಿದೆ.
ವಿವಿಧ ವೃಂದದ ಹುದ್ದೆಗಳನ್ನು ಕಡಿತಗೊಳಿಸುವ ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳ ವೈದ್ಯರ ಸಂಖ್ಯೆಯನ್ನು ಇಳಿಸಿದೆ. 50 ಹಾಸಿಗೆಗಳಿಗೆ ನಿಯಮಗಳ ಪ್ರಕಾರ ಒಬ್ಬ ಫಿಜಿಷಿಯನ್, ಒಬ್ಬ ಜನರಲ್ ಸರ್ಜನ್, ಒಬ್ಬ ಅರವಳಿಕೆ ತಜ್ಞ, ಒಬ್ಬರು ಪ್ರಸೂತಿ ತಜ್ಞರು ಸೇರಿದಂತೆ 7 ತಜ್ಞ ವೈದ್ಯರನ್ನು ನಿಯಮಿತಗೊಳಿಸಿದೆ.
ಏನಾಗಬಹುದು?: ಅತಿ ಬಡವರು, ಬಡವರು, ಮಧ್ಯಮ ವರ್ಗದವರು ಬಳಸಿಕೊಳ್ಳುವ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇನ್ನಷ್ಟು ಬಾಧಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇದಕ್ಕಿಂತ ಮುಖ್ಯವಾಗಿ ಇರುವ ವೈದ್ಯರು ಕೆಲಸ ಒತ್ತಡ ಹೆಚ್ಚಾಗಿ ರಾಜಿನಾಮೆ ಕೊಡುವ ಸಾದ್ಯತೆಯೂ ಹೆಚ್ಚು.
ಪಿಂಚಣಿ ಸೌಲಭ್ಯ, ಅನುಕಂಪ ಆಧಾರಿತ ಕೆಲಸ ಸೇರಿದಂತೆ ವಿವಿಧ ಸೇವೆಗಳನ್ನು ಹಾಲಿ ವೈದ್ಯರಿಗೆ ಕಡಿತಗೊಳಿಸಿರುವುದರಿಂದ ಬೇಸತ್ತು ಸೇವೆಯಲ್ಲಿರುವ ವೈದ್ಯರು ಸರ್ಕಾರಿ ಸೇವೆಯಿಂದ ದೂರ ಉಳಿಯಬಹುದು. ಇದರಿಂದ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಕಷ್ಟ ಎದುರಾಗಲಿದೆ. ಒಬ್ಬರೇ ಪಿಜಿಷಿಯನ್ ಇರುವ ಕಡೆ ಜನ ಸಾಮಾನ್ಯರಿಗೆ ಗುಣಮಟ್ಟದ ಆರೋಗ್ಯ ಸೇವೆ ದುರ್ಲಬವಾಗಬಹುದು.